ನವದೆಹಲಿ, ಜೂ. 21 (DaijiworldNews/SM): ಕೊರೋನಾ ಲಸಿಕೆಯ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ನಡುವೆ ಲಸಿಕೆ ಪಡೆದವರಿಗೆ ಬಂಜೆತನದ ಸಮಸ್ಯೆ ಎದುರಾಗುತ್ತದೆ ಎನ್ನುವ ಮಾತುಗಳನ್ನು ಕೆಲವರು ಹೇಳುತ್ತಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ.
ಕೋವಿಡ್ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುವುದಿಲ್ಲ ಮತ್ತು ವಯಸ್ಕರಲ್ಲಿ ಸಂತಾನೋತ್ಪತ್ತಿಯ ಮೇಲೆ ಲಸಿಕೆಗಳು ಪರಿಣಾಮ ಬೀರುತ್ತದೆ ಎನ್ನುವುದು ತಪ್ಪು ಗ್ರಹಿಕೆ ಎಂಬಿವುದಾಗಿ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಆರೋಗ್ಯ ಇಲಾಖೆ ಕಾರ್ಯಕರ್ತರು ಸೇರಿದಂತೆ ಮುಂಚೂಣಿ ಕಾರ್ಯಕರ್ತರು ಇಂತಹ ತಪ್ಪು ಯೋಚನೆಯನ್ನು ಹೊಂದಿದ್ದಾರೆ. ಲಸಿಕಾ ಅಭಿಯಾನ ಸಂದರ್ಭದಲ್ಲಿ ಸಮುದಾಯದಲ್ಲಿ ಇಂತಹ ತಪ್ಪು ಸಂದೇಶ ಮತ್ತು ವದಂತಿಗಳು ಹರಡುತ್ತಿರುವುದನ್ನು ಗಮನಿಸಲಾಗಿದೆ.
ಪ್ರಸ್ತುತ ವಿತರಿಸಲಾಗುತ್ತಿರುವ ಲಸಿಕೆಗಳು ಬಂಜೆತನ, ಫಲವತ್ತತೆ ಮೇಲೆ ಪರಿಣಾಮ ಬೀರುವುದಿಲ್ಲ. ಈಗಾಗಲೇ ಈ ಲಸಿಕೆಗಳ ಬಗ್ಗೆ ಸಮರ್ಪಕ ಪರೀಕ್ಷೆಗಳನ್ನು ನಡೆಸಲಾಗಿದೆ. ಸದ್ಯ ಯಾವುದೇ ಅಡ್ಡ ಪರಿಣಾಮದ ಉಲ್ಲೇಖ ಇಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.