ಅಮೃತಸರ, ಜೂ 21 (DaijiworldNews/PY): 2015ರ ಕೋಟ್ಕಾಪುರ ಪೊಲೀಸ್ ಗುಂಡಿನ ದಾಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ಐಟಿ ಭಾಗವಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಕುನ್ವರ್ ವಿಜಯ್ ಪ್ರತಾಪ್ ಸಿಂಗ್ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
ದೆಹಲಿ ಸಿಎಂ ಹಾಗೂ ಎಎಪಿ ರಾಷ್ಟ್ರೀಯ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ಅವರು ಅಮೃತಸರಕ್ಕೆ ಪ್ರಯಾಣ ಬೆಳೆಸಿದ್ದು,ಅಲ್ಲಿ ವಿಜಯ್ ಪ್ರತಾಪ್ ಸಿಂಗ್ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
"ಇಂದು ಬಹಳ ಸಂತೋಷದ ದಿನವಾಗಿದೆ. ಕುನ್ವರ್ ಪ್ರತಾಪ್ ಸಿಂಗ್ ಅವರು ಎಎಪಿಗೆ ಸೇರಿದ್ದಾರೆ" ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಭಗವಂತ್ ಮನ್ ತಿಳಿಸಿದ್ದಾರೆ.
"ನಮಗೆ ರಾಜಕೀಯ ಹೇಗೆ ಮಾಡಬೇಕೆಂದು ತಿಳಿದಿಲ್ಲ. ದೇಶ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸಲು ಇಲ್ಲಿ ಬಂದಿದ್ದೇವೆ. ಆ ಮನೋಭಾವದಿಂದ ಕುನ್ವರ್ ವಿಯ್ ಪ್ರತಾಪ್ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.
ಕುನ್ವರ್ ವಿಜಯ್ ಪ್ರತಾಪ್ ಅವರು 2009ರಲ್ಲಿ ನಿವೃತ್ತರಾಗಬೇಕಿತ್ತು. ಆದರೆ, ಅವರು ಅದಕ್ಕೂ ಮುನ್ನ ರಾಜೀನಾಮೆ ನೀಡಿದ್ದು, ಆರಂಭದಲ್ಲಿ ಪ್ರತಾಪ್ ಅವರ ರಾಜೀನಾಮೆಯನ್ನು ಸ್ವೀಕರಿಸಲು ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ನಿರಾಕರಿಸಿದ್ದರು.ಆದರೆ ಮಾಜಿ ಐಜಿ ಶ್ರೇಣಿಯ ಅಧಿಕಾರಿ ತಮ್ಮ ನಿಲುವಿನ ಬಗ್ಗೆ ದೃಢವಾಗಿದ್ದ ಕಾರಣ ಸಿಎಂ ಅವರ ಅಕಾಲಿಕ ನಿವೃತ್ತಿಯ ಕೋರಿಕೆಯನ್ನು ಸ್ವೀಕರಿಸಿದ್ದರು.