ಬೆಂಗಳೂರು, ಜೂ 21 (DaijiworldNews/MS): ರಾಜ್ಯವನ್ನು ಕೊರೊನಾ ಮುಕ್ತಗೊಳಿಸುವ ದೃಷ್ಟಿಯಿಂದ ಡಿಸೆಂಬರ್ ಒಳಗಾಗಿ ಎಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಮೆಡಿಕಲ್ ಕಾಲೇಜಿನಲ್ಲಿ ಲಸಿಕಾ ಮಹಾ ಅಭಿಯಾನಕ್ಕೆ ಪಾಲ್ಗೊಂಡು ಮಾತನಾಡಿದ ಸಚಿವರು, ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಒಂದೇ ದಿನ ಸುಮಾರು 7 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. 18-44 ವರ್ಷದವರಿಗೆ ಲಸಿಕೆ ಹಾಗೂ ಎರಡನೇ ಡೋಸ್ ಪಡೆಯುವವರಿಗೂ ಲಸಿಕೆ ನೀಡಲಾಗುತ್ತಿದೆ. ಡಿಸೆಂಬರ್ ಕೊನೆಯಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಲಸಿಕೆ ನೀಡಿ, ರಾಜ್ಯವನ್ನು ಕೊವೀಡ್ ಮುಕ್ತಗೊಳಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ..
ಆರಂಭದಲ್ಲಿ ಕೆಲ ಪಕ್ಷಗಳು ಹೇಳಿಕೆಗಳಿಂದ ಜನರಿಗೆ ಲಸಿಕೆ ಬಗ್ಗೆ ಅಂಜಿಕೆ ಇತ್ತು, ಆದರೆ ಈಗ ಜನರಿಗೆ ನಂಬಿಕೆ ಬಂದಿದ್ದು ಲಸಿಕೆಯೇ ಪರಿಹಾರವೆಂಬುವುದು ಅರಿವಾಗಿದೆ. 15 ಲಕ್ಷಕ್ಕೂ ಅಧಿಕ ಕೋವಿಶೀಲ್ಡ್ ಹಾಗೂ 6-7 ಲಕ್ಷ ಕೋವ್ಯಾಕ್ಸಿನ್ ಲಸಿಕೆ ರಾಜ್ಯದಲ್ಲಿ ಸಂಗ್ರಹವಿದೆ. 1.86 ಕೋಟಿ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ 13 ಸಾವಿರ ಲಸಿಕಾ ಕೇಂದ್ರಗಳಿವೆ. ಒಂದು ಕೇಂದ್ರದಲ್ಲಿ 70-80 ಜನರಿಗೆ ಲಸಿಕೆ ನೀಡಿದರೂ ನಾವು ಗುರಿ ಮುಟ್ಟಲು ಸಾಧ್ಯವಿದೆ. ಇದಕ್ಕೆ ಜನರ ಸಂಪೂರ್ಣ ಸಹಕಾರ ಬೇಕಿದೆ ಎಂದು ವಿವರಿಸಿದ್ದಾರೆ.
'ಬಿ ವಿತ್ ಯೋಗ', 'ಯೋಗ ಫಾರ್ ವೆಲ್ ನೆಸ್' ಎಂಬ ಘೋಷವಾಕ್ಯದೊಂದಿಗೆ ಯೋಗ ದಿನ ಆಚರಿಸಲಾಗುತ್ತಿದೆ. ಯೋಗ ಕೇವಲ ದೈಹಿಕ ಮಾತ್ರವಲ್ಲದೆ, ಮಾನಸಿಕ, ಸಾಮಾಜಿಕ ಆರೋಗ್ಯಕ್ಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.