ನವದೆಹಲಿ, ಜೂ 21 (DaijiworldNews/PY): "ಕಾಂಗ್ರೆಸ್ನಲ್ಲಿ ಯಾವುದೇ ರೀತಿಯಾದ ಗುಂಪುಗಾರಿಕೆ ಇಲ್ಲ. ಗುಂಪುಗಾರಿಕೆಗೆ ಅವಕಾಶ ನೀಡುವುದಿಲ್ಲ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, "ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ, ಒಳಜಗಳವಾಗಲಿ ಇಲ್ಲ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವುದೇ ನಮ್ಮ ಉದ್ದೇಶ. ಬದಲಾಗಿ ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸುವಂತ ಸಮಯವಲ್ಲ" ಎಂದಿದ್ದಾರೆ.
"ಕಳೆದ ಒಂದು ವರ್ಷದಿಂದ ನಾನು ದೆಹಲಿಗೆ ಭೇಟಿ ನೀಡಿಲ್ಲ. ಈ ಹಿನ್ನೆಲೆ ನಾನು ದೆಹಲಿಗೆ ಭೇಟಿ ನೀಡಿದ್ದೇನೆ. ನಮ್ಮ ಪಕ್ಷದವರು ಸಿಎಂ ಸ್ಥಾನದ ವಿಚಾರದ ಬಗ್ಗೆ ಮಾತನಾಡುವ ಪ್ರಶ್ನೆಯೇ ಇಲ್ಲ. ಮೊದಲು ಬಿಬಿಎಂಪಿ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು ಗೆಲ್ಲಬೇಕಿದೆ. ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ಅದು ಬಿಟ್ಟು ಸಿಎಂ ಸ್ಥಾನದ ಬಗ್ಗೆ ಚರ್ಚೆ ನಡೆಸುವ ಸಮಯ ಇದಲ್ಲ" ಎಂದು ಹೇಳಿದ್ದಾರೆ.
"ಅಷ್ಟಕ್ಕೂ ಸದ್ಯ ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿಯಿಲ್ಲ. ಖಾಲಿ ಇಲ್ಲದೇ ಇರುವ ಸ್ಥಾನದ ಬಗ್ಗೆ ಏಕೆ ಪೈಪೋಟಿ?. ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಕೆಲವೊಂದು ಬದಲಾವಣೆಯ ಅವಶ್ಯಕತೆ ಇದೆ. ಹಾಗಾಗಿ ಚರ್ಚೆ ನಡೆಸಬೇಕಿದೆ" ಎಂದಿದ್ದಾರೆ.