ಮೈಸೂರು, ಜೂ.21 (DaijiworldNews/HR): ರೋಹಿಣಿ ಸಿಂಧೂರಿ ಅವರು ಮೈಸೂರು ಡಿಸಿಯಾಗಿದ್ದ ಸಮಯದಲ್ಲಿ ಜಿಲ್ಲಾಧಿಕಾರಿಯ ಅಧಿಕೃತ ನಿವಾಸದಲ್ಲಿ ನವೀಕರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನಡೆಸಿ ವರದಿ ನೀಡಲು ಕಂದಾಯ ಇಲಾಖೆಯು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.
ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯದೆ ಅಧಿಕೃತ ನಿವಾಸ ಜಲಸನ್ನಿಧಿಯಲ್ಲಿ ನವೀಕರಣ ಮಾಡಿದ್ದರು.
ಇನ್ನು ಕಟ್ಟಡದ ನೆಲಹಾಸು ನವೀಕರಣಕ್ಕೆ 16.50 ಲಕ್ಷ ಖರ್ಚು ಮಾಡಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ದೂರು ನೀಡಿದ್ದು, ಈ ದೂರನ್ನು ಆಧರಿಸಿ ಇದೀಗ ತನಿಖೆಗೆ ಆದೇಶಿಸಲಾಗಿದೆ.
ಈ ಬಗ್ಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಲಾಗದ್ದು, ಏಳು ದಿನಗಳ ಒಳಗಾಗಿ ವರದಿ ನೀಡುವಂತೆ ಸೂಚಿಸಲಾಗಿದೆ.
ಇನ್ನು ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ಜಲಸನ್ನಿಧಿಯು ಪಾರಂಪರಿಕ ಕಟ್ಟಡವಾಗಿದ್ದು, ಈ ಕಟ್ಟಡದಲ್ಲಿ ನವೀಕರಣ ಮಾಡಬೇಕಾದರೆ ಪಾರಂಪರಿಕ ಕಟ್ಟಡ ಸಂರಕ್ಷಣಾ ಸಮಿತಿಯಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ರೋಹಿಣಿ ಸಿಂಧೂರಿ ಅವರು ಯಾವುದೇ ಪೂರ್ವಾನುಮತಿ ಪಡೆಯದೆ ನವೀಕರಣ ಮಾಡಿಸಿದ್ದಾರೆ ಎಂದು ಸಾ.ರಾ.ಮಹೇಶ್ ಆರೋಪಿಸಿದ್ದರು ಎನ್ನಲಾಗಿದೆ.