ಬೆಂಗಳೂರು, ಜೂ 21 (DaijiworldNews/MS): ಸಂಭಾವನೀಯ ಕೋವಿಡ್ 3ನೇ ಅಲೆ ಮಕ್ಕಳಿಗೆ ಭಾದಿಸುವ ಬಗ್ಗೆ ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಚಿವರಿ, "ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯಲು ಪೂರ್ವಸಿದ್ಧತೆ ನಡೆಸಲಾಗಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 2,34,812 ಮಕ್ಕಳು ಕರೊನಾ ಸೋಂಕಿಗೆ ಒಳಗಾಗಿದ್ದು, ಈ ಪೈಕಿ 117 ಮಕ್ಕಳು ಮೃತಪಟ್ಟಿದ್ದಾರೆ. ಅಪೌಷ್ಟಿಕತೆ ಇರುವ ಮಕ್ಕಳಲ್ಲಿ ಹೆಚ್ಚಾಗಿ ಕರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಅಂಗನವಾಡಿ ಮಕ್ಕಳಿಗೆ ಮನೆ ಬಾಗಿಲಿಗೆ ಪೌಷ್ಟಿಕ ಆಹಾರ ಸಾಮಗ್ರಿ ಒದಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸಂಭಾವ್ಯ ಮೂರನೇ ಕರೊನಾ ಅಲೆ ಸಿದ್ಧತಾ ಕ್ರಮಗಳ ಅಂಗವಾಗಿ, ರಾಜ್ಯ ರಾಜಧಾನಿಯಲ್ಲಿ ಮಕ್ಕಳಿಗಾಗಿ 1419 ಬೆಡ್ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ 47 ವೆಂಟಿಲೇಟರ್ಗಳುಳ್ಳ ಐಸಿಯು ಬೆಡ್ಗಳಾಗಿವೆ. 116 ವೆಂಟಿಲೇಟರ್ ರಹಿತ ಐಸಿಯು ಬೆಡ್ಗಳ ವ್ಯವಸ್ಥೆ ಮಾಡಲಾಗಿದ್ದು, 671 ಹೆಚ್ಡಿಯು ಬೆಡ್ಗಳನ್ನೂ ಒದಗಿಸಲಾಗಿದೆ, 585 ಸಾಮಾನ್ಯ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವೆ ಜೊಲ್ಲೆ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲಿ ನಾಲ್ಕು ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಗಳನ್ನು ಗುರುತಿಸಲಾಗಿದೆ. ನಗರದ ಕೆ.ಆರ್.ಪುರಂ ಐಟಿಐನಲ್ಲಿ 150 ಬೆಡ್ ಸಾಮರ್ಥ್ಯ ಕಲ್ಪಿಸಲಾಗಿದ್ದು, 100 ಆಕ್ಸಿಜನ್ ಬೆಡ್ ಮತ್ತು 50 ಐಸಿಯು ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಕಲ್ಯಾಣ ಮಂಟಪ, ಹಾಸ್ಟೆಲ್ಗಳು, ಮೊರಾರ್ಜಿ ದೇಸಾಯಿ ಕಟ್ಟಡಗಳನ್ನು ಕರೊನಾ ಆರೈಕೆ ಕೇಂದ್ರಗಳಾಗಿ ಮಾಡಲಾಗುವುದು. ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಮಕ್ಕಳ ಚಿಕಿತ್ಸೆಗಾಗಿ ಪರಿಣಿತ ವೈದ್ಯರನ್ನು ಗುರುತಿಸಲಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿದ್ದಾರೆ.