ನವದೆಹಲಿ, ಜೂ 21 (DaijiworldNews/PY): ಕೊರೊನಾದಿಂದ ಸಾವನ್ನಪ್ಪಿದ ಕುಟುಂಬದವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದು, "ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು ಮೋದಿ ಸರ್ಕಾರ ಸಿದ್ದವಾಗಿಲ್ಲ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸತ್ತ ವ್ಯಕ್ತಿಯ ಜೀವಕ್ಕೆ ಬೆಲೆ ಕಟ್ಟಲು ಅಸಾಧ್ಯ. ಆದರೆ, ಸರ್ಕಾರ ನೀಡುವ ಪರಿಹಾರ ಆ ಕುಟುಂಬಕ್ಕೆ ಸಣ್ಣ ಸಹಾಯವಾಗುತ್ತದೆ. ಆದರೆ, ಮೋದಿ ಅದನ್ನು ಮಾಡಲು ಸಿದ್ದವಾಗಿಲ್ಲ" ಎಂದಿದ್ದಾರೆ.
"ಪ್ರಾರಂಭದಲ್ಲಿ ಕೊರೊನಾದಿಂದ ಬಳಲುತ್ತಿದ್ದ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಿಲ್ಲ. ಬಳಿಕ ಕೊರೊನಾದ ಬಗ್ಗೆ ಸುಳ್ಳು ಅಂಕಿ-ಅಂಶಗಳನ್ನು ನೀಡುವ ಮುಖೇನ ಸರ್ಕಾರ ತನ್ನ ಕ್ರೌರ್ಯ ಪ್ರದರ್ಶಿಸಿದೆ" ಎಂದು ಆರೋಪಿಸಿದ್ದಾರೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ 4 ಲಕ್ಷ ರೂ. ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿದ ಹಿನ್ನೆಲೆ ರಾಹುಲ್ ಈ ಟ್ವೀಟ್ ಮಾಡಿದ್ದಾರೆ.