ಬೆಂಗಳೂರು, ಜೂ 21 (DaijiworldNews/MS): ರಾಜ್ಯದಲ್ಲಿ ಲಾಕ್ ಡೌನ್ ಸಡಿಲಿಸಿ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಅವಕಾಶ ಕಲ್ಪಿಸಿರುವ ಹಿನ್ನಲೆಯಲ್ಲಿ ಇಂದಿನಿಂದ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆ ಹೊರತುಪಡಿಸಿ ರಾಜ್ಯಾದ್ಯಂತ ಸರಕಾರಿ ಬಸ್ಗಳ ಸಂಚಾರ ಪ್ರಾರಂಭವಾಗಲಿದೆ.
ರಾಜ್ಯದಲ್ಲಿ ಅನ್ಲಾಕ್ ಆದೇಶದ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿಯ ಎಲ್ಲ ಪ್ರಕಾರಗಳ ಬಸ್ಗಳು ರಾತ್ರಿ ಕರ್ಫ್ಯೂ ಅವಧಿ ಸಹಿತ ದಿನಪೂರ್ತಿ ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಗಮವು ಅನುಸೂಚಿಗಳ ವ್ಯವಸ್ಥೆ ಕಲ್ಪಿಸಲಿದೆ. ಪ್ರಾರಂಭಿಕವಾಗಿ ಸುಮಾರು 3 ಸಾವಿರ ಬಸ್ಸುಗಳನ್ನು ಕಾರ್ಯಾಚರಿಸಲು ಯೋಜಿಸಲಾಗಿದೆ
ಇನ್ನು ಭಾನುವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ 2ನೇ ಹಂತದ ಸಡಿಲಿಕೆಯ ಆದೇಶ ಹೊರಡಿಸಿದ್ದು, ಜಿಲ್ಲೆಯ ಮೂಲಕ ಮತ್ತು ಒಳಗೆ ಬಸ್ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮಂಗಳೂರು ಸರಹದ್ದಿನ ಹೊರಗೆ ಬಸ್ಗಳು ನಿಲುಗಡೆ ಆಗಲಿವೆ.