ಹುಬ್ಬಳ್ಳಿ, ಜೂ 20 (DaijiworldNews/PY): "ಸಿಎಂ ಬದಲಾವಣೆ ಇಲ್ಲ ಎಂದು ಸಚಿವರು ಹಾಗೂ ಹೈಕಮಾಂಡ್ ಸ್ಪಷ್ಟಪಡಿಸಿದೆ. ಆದರೂ ಕೂಡಾ ಸಿಎಂ ಬದಲಾವಣೆಯ ಪ್ರಶ್ನೆಗಳು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಸಿಎಂ ಖುರ್ಚಿ ಖಾಲಿ ಇಲ್ಲವೆಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ" ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶಾಸಕ ಅರವಿಂದ್ ಬೆಲ್ಲದ್ ಸಿಎಂ ಆಗುವ ವಿಚಾರದ ಬಗ್ಗೆ ನಾನು ಏನೂ ಹೇಳಲಾರೆ. ಅಲ್ಲದೇ, ನಾಯಕತ್ವದ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಸಿಎಂ ಬದಲಾವಣೆಯ ಪ್ರಶ್ನೆಗಳು ಮತ್ತೆ ಮತ್ತೆ ಕೇಳಿ ಬರುತ್ತಿದ್ದು, ಸಿಎಂ ಖುರ್ಚಿ ಖಾಲಿ ಇಲ್ಲವೆಂದು ಎದೆ ಮೇಲೆ ಬೋರ್ಡ್ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಪಕ್ಷದಲ್ಲಿ ಯಾರಾದರೂ ಕೆಮ್ಮಿದ್ದಲ್ಲೊ ನಾನು ಹೊಣೆಯಾಗಬೇಕಾದ ಸ್ಥಿತಿ ಬಂದಿದೆ" ಎಂದಿದ್ದಾರೆ.
"ಅರವಿಂದ್ ಬೆಲ್ಲದ್ ಮುಂದಿನ ಸಿಎಂ ಎನ್ನುವ ಬಗ್ಗೆ ರಾಜ್ಯ ಮಟ್ಟದಲ್ಲಿ ಚರ್ಚೆಯಾಗಿದೆ. ಯಾರ ಹಣೆಯಲ್ಲಿ ಏನು ಬರೆದಿರುತ್ತೋ ಹಾಗೇ ಆಗುತ್ತದೆ. ಈ ವಿಚಾರದ ಬಗ್ಗೆ ಹೈಕಮಾಂಡ್ ಸೂಕ್ತವಾದ ತೀರ್ಮಾನ ಕೈಗೊಳ್ಳಲಿದೆ" ಎಂದು ತಿಳಿಸಿದ್ದಾರೆ.
ನಿಮ್ಮನ್ನು ಬೆಲ್ಲದ್ ಅವರು ಓವರ್ ಟೇಕ್ ಮಾಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಬೆಲ್ಲದ್ ಅವರ ಸ್ವಭಾವೇ ಹಾಗಿದೆ" ಎಂದಿದ್ದಾರೆ.