ಬೆಂಗಳೂರು, ಜೂ 20 (DaijiworldNews/PY): "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕ ಜಮೀರ್ ಅವರ ಹೆಗಲ ಮೇಲೆ ಬಂದೂಕು ಇಟ್ಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಡೆ ಗುರಿ ಮಾಡಿ ದಾಳಿ ಮಾಡುತ್ತಿದ್ದಾರೆ" ಎಂದು ಬಿಜೆಪಿ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶಾಸಕ ಜಮೀರ್ ಅವರ ಹೆಗಲ ಮೇಲೆ ಬಂದೂಕು ಇಟ್ಟು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಡೆ ಗುರಿ ಮಾಡಿ ದಾಳಿ ಮಾಡುತ್ತಿದ್ದಾರೆ. ಮುಂದಿನ ಸಿಎಂ ಪಟ್ಟದ ಹಾದಿಯನ್ನು ಈಗಲೇ ಸುಗಮಗೊಳಿಸುವ ಬಗ್ಗೆ ಸಿದ್ದರಾಮಯ್ಯ ಅವರು ರಹಸ್ಯ ತಂತ್ರ ಹೆಣೆಯುತ್ತಿದ್ದಾರೆ" ಎಂದಿದೆ.
"ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಈಗ ಸಿಎಂ ಪಟ್ಟಕ್ಕಾಗಿ ಕಲಹ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ತನ್ನ ಆಪ್ತರನ್ನು ಬಳಸಿ 'ಮುಂದಿನ ಸಿಎಂ ಸಿದ್ದರಾಮಯ್ಯ' ಎಂಬ ತುರ್ತು ಪರಿಸ್ಥಿತಿಯನ್ನು ಪಕ್ಷದ ಒಳಗೆ ಸೃಷ್ಟಿಸುತ್ತಿದ್ದಾರೆ. ಡಿಕೆಶಿ ಅವರೇ, ನಿಮಗೆ ಖೆಡ್ಡಾ ತಯಾರಾಗುತ್ತಿದೆ!" ಎಂದು ತಿಳಿಸಿದೆ.
"ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪಕ್ಷ ಕಟ್ಟಲಿ, ನಾನು ಮುಖ್ಯಮಂತ್ರಿ ಪಟ್ಟದ ಮೇಲೆ ಜಿಗಿಯುತ್ತೇನೆ ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಇದಕ್ಕಾಗಿಯೇ ತಮ್ಮ ಆಪ್ತರ ಮೂಲಕ ಸಿದ್ದರಾಮಯ್ಯ ಹೇಳಿಕೆ ಕೊಡಿಸುತ್ತಿದ್ದಾರೆ. ಉಸ್ತುವಾರಿ ಸುರ್ಜೇವಾಲರಿಗೂ ಈ ಬೀದಿ ಕಾಳಗ ನೋಡಿ ಸುಸ್ತಾಗಿರಬಹುದು!" ಎಂದಿದೆ.
"ರಾಜ್ಯ ಕಾಂಗ್ರೆಸ್ ಪರಿಸ್ಥಿತಿ ಈಗ ಅಯೋಮಯವಾಗಿದೆ. ಡಿಕೆಶಿ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಹೋರಾಡುತ್ತಿದ್ದಾರೆ. ನಿಜಕ್ಕೂ ನತದೃಷ್ಟರು ಎಂದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಯಾರಿಗೆ ಜೈ ಎನ್ನಬೇಕು ಎನ್ನುವ ಗೊಂದಲ ಅವರನ್ನು ಕಾಡುತ್ತಿದೆ" ಎಂದು ಹೇಳಿದೆ.
"ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಮಧ್ಯೆ ಸಿದ್ದರಾಮಯ್ಯ ಸಿಎಂ ಹುದ್ದೆಗೆ ಕಣ್ಣಿಟ್ಟಿದ್ದಾರೆ. ಸಿದ್ದರಾಮಯ್ಯ ಆಣತಿಯಂತೆ ಕ್ಷೇತ್ರ ತ್ಯಾಗಕ್ಕೆ ಮುಂದಾಗಿರುವ ಜಮೀರ್ ಮೂಲಕ ಕನಕಪುರ ಬಂಡೆಯ ಬುಡಕ್ಕೆ ಡೈನಾಮೇಟ್ ಇಡಲಾಗುತ್ತಿದೆ. ಡಿಕೆಶಿ ಅವರೇ, ಪರಮೇಶ್ವರ್ ಅವರಿಗಾದ ಪರಿಸ್ಥಿತಿ ನೆನಪಿಸಿಕೊಳ್ಳಿ" ಎಂದಿದೆ.
"ರಾಜ್ಯ ಕಾಂಗ್ರೆಸ್ ಡಿಕೆಶಿ ಅವರಂಥಹ ದುರ್ಬಲ ರಾಜ್ಯಾಧ್ಯಕ್ಷರನ್ನು ಕಂಡಿರುವ ಸಾಧ್ಯತೆ ಕಡಿಮೆ. ಕೆಪಿಸಿಸಿ ಅಧ್ಯಕ್ಷರಿಂದಲೂ ಜಮೀರ್ ಅಹ್ಮದ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಮೇಲುಗೈ ಸಾಧಿಸುತ್ತಿದ್ದಾರೆ. ವಲಸಿಗರ ಮುಂದೆ ಮೂಲ ಕಾಂಗ್ರೆಸ್ಸಿಗರು ಮಂಡಿಯೂರಿ ಬಿಟ್ಟಿದ್ದಾರೆ!!!" ಎಂದು ಹೇಳಿದೆ.
"ಕಾಂಗ್ರೆಸ್ ಕಲಹ ಕೇವಲ ಆರಂಭವಷ್ಟೇ...! ಕೆಲವೇ ದಿನದಲ್ಲಿ ಕಾಂಗ್ರೆಸ್ ಒಳ ಜಗಳ ಇನ್ನೂ ದೊಡ್ಡ ಪ್ರಮಾಣದಲ್ಲಿ ಬೀದಿಗೆ ಬಂದು ಬೀಳಲಿದೆ. ಸಿಎಂ ಸ್ಥಾನದ ಆಕಾಂಕ್ಷಿಗಳ ದೊಡ್ಡ ಹಿಂಡು ಬಹಿರಂಗ ಕದನಕ್ಕೆ ಇಳಿಯುವುದು ನಿಶ್ಚಿತ. ಒಬ್ಬರನ್ನೊಬ್ಬರು ಸೋಲಿಸಲು ಕಾದಾಡುವುದನ್ನು, ಗಾಂಧಿ ಕುಟುಂಬದಿಂದಲೂ ತಪ್ಪಿಸಲಾಗದು" ಎಂದು ತಿಳಿಸಿದೆ.
"ಕೆಪಿಸಿಸಿ ಅಧ್ಯಕ್ಷರೇ ಸಿಎಂ ಆಗ ಬೇಕಿತ್ತು. ಆದರೆ 2013 ರಲ್ಲಿ ಪರಮೇಶ್ವರ್ ಅವರನ್ನು ಸೋಲಿಸುವ ಮೂಲಕ ಸಿದ್ದರಾಮಯ್ಯ ಈ ಸಂಪ್ರದಾಯ ಮುರಿದರು. ಈಗ ಮತ್ತೊಮ್ಮೆ ಅದೇ ರಾಜಕೀಯದಾಟ ಮುನ್ನಲೆಗೆ ಬರುತ್ತಿದೆ. ಅದಕ್ಕಾಗಿ ಸಿದ್ದರಾಮಯ್ಯ ಪಾಳಯದಿಂದ ರಣತಂತ್ರ ರೂಪುಗೊಳ್ಳುತ್ತಿದೆ. ಡಿಕೆಶಿ ಅವರೇ, ಎಚ್ಚರ!!!" ಎಂದಿದೆ.