ಶಿವಮೊಗ್ಗ, ಜೂ 20 (DaijiworldNews/PY): "ವಿಪಕ್ಷ ನಾಯ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ಆಗುವ ಕನಸು ಕಾಣುವ ಮುನ್ನ ಶಾಸಕರಾಗಿ ಗೆದ್ದು ಬರಲಿ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ಸಿಗರು ಐದು ವರ್ಷ ರಾಜ್ಯದಲ್ಲಿ ಹಾಗೋ ಹೀಗೋ ಅಧಿಕಾರ ನಡೆಸಿದರು. ನಂತರ ಈ ಸರ್ಕಾರ ಬೇಡ ಎಂದು ಜನ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದರು. ಸಿಎಂ ಆಗಿದ್ದಂತ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಬದಾಮಿ ಕ್ಷೇತ್ರದಲ್ಲಿ ಕಷ್ಟಪಟ್ಟು ಗೆದ್ದಿದ್ದಾರೆ. ಈಗ ಚಾಮರಾಜಪೇಟೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ" ಎಂದು ಲೇವಡಿ ಮಾಡಿದ್ದಾರೆ.
"ಕಾಂಗ್ರೆಸ್ನ ಹಲವು ಸಚಿವರು, ಶಾಸಕರನ್ನು ಕಳೆದ ಬಾರಿಯ ವಿಧಾನ ಸಭೆಯ ಚುನಾವಣೆಲ್ಲಿ ಮತದಾರರು ಸೋಲಿಸಿದರು. ಹೀಗಾದರೂ ಕೂಡಾ ಅವರು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಇದೀಗ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಇದಕ್ಕೂ ಮುನ್ನ ಅವರು ಶಾಸಕರಾಗಿ ಗೆದ್ದು ಬರಲಿ" ಎಂದು ಸವಾಲು ಹಾಕಿದ್ದಾರೆ.
"ಕಾಂಗ್ರೆಸ್ಗೆ ಮುಂಬರುವ ಚುನಾವಣೆಯಲ್ಲಿ ಬಹುಮತ ಎನ್ನುವ ಪ್ರಶ್ನೆಯೇ ಇಲ್ಲ. ಮುಂದಿನ ಎರಡು ವರ್ಷಗಳ ಕಾಲ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತದೆ. ಮುಂಬರುವ ಚುನಾವಣೆಯಲ್ಲಿಯೂ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ" ಎಂದಿದ್ದಾರೆ.