ಬೆಂಗಳೂರು, ಜೂ 20 (DaijiworldNews/PY): "ನೀರಾವರಿ ಇಲಾಖೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಟೆಂಡರ್ ಪಾರದರ್ಶಕವಾಗಿದೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೀರಾವರಿ ಇಲಾಖೆಯ ಟೆಂಡರ್ ಹಿಂದಿನ ಸರ್ಕಾರಗಳಲ್ಲಿನ ಟೆಂಡರ್ನ ಪ್ರಕ್ರಿಯೆಯಂತೆಯೇ ನಡೆದಿದೆ. ಟೆಂಡರ್ ಕೆಟಿಟಿಪಿ ಕಾಯ್ದೆಯ ಪ್ರಕಾರ ನಡೆದಿದ್ದು, ಎಲ್ಲವೂ ಪಾರದರ್ಶಕವಾಗಿದೆ" ಎಂದಿದ್ದಾರೆ.
"ಟೆಂಡರ್ ಬಗ್ಗೆ ಇಲಾಖೆ ಕಾರ್ಯದರ್ಶಿಯೇ ಸತ್ಯಾಸತ್ಯತೆ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ತಿಳಿದ ಬಳಿಕ ತನಿಖೆಯ ಅವಶ್ಯಕತೆ ಇಲ್ಲ. ಪ್ರತಿಪಕ್ಷಗಳಿಂದ ಈ ರೀತಿಯಾದ ಆರೋಪ ಸಹಜ" ಎಂದು ಹೇಳಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದ್ದು, ಈ ಬಗ್ಗೆ ಶಾಸಕರಿಂದಲೂ ಮಾಹಿತಿ ಕಲೆಹಾಕಲಾಗಿದೆ" ಎಂದು ತಿಳಿಸಿದ್ದಾರೆ.