ಬೆಂಗಳೂರು, ಜೂ 20 (DaijiworldNews/PY): "ಜೂನ್ 21ರಂದು ಏಳು ಲಕ್ಷ ಜನರಿಗೆ ಚುಚ್ಚುಮದ್ದು ನೀಡುವ ಗುರಿಯೊಂದಿಗೆ ಲಸಿಕೆ ಮೇಳವನ್ನು ಆಯೋಜಿಸಲಾಗುವುದು" ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಸ್ತುತ ಕೊರೊನಾ ಇರುವ ಹಿನ್ನೆಲೆ ಯಾರೂ ಕೂಡಾ ಹೊರಾಂಗಣದಲ್ಲಿ ಯೋಗ ದಿನವನ್ನು ಆಚರಿಸಬಾರದು. ಮನೆಗಳಲ್ಲಿಯೇ ಯೋಗ ಮಾಡುವ ಮೂಲಕ ಯೋಗ ದಿನ ಆಚರಿಸಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಹಂಚಿಕೊಳ್ಳಿ" ಎಂದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲಾ ಕರ್ನಾಟಕ ಸಚಿವರು, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಯೋಗ ದಿನವನ್ನು ಆಚರಿಸಲಿದ್ದಾರೆ. ಕೆಲ ಪ್ರಮುಖ ಯೋಗ ಗುರುಗಳು ಹಾಗೂ ಆಧ್ಯಾತ್ಮಿಕ ಸ್ನಾತಕೋತ್ತರ ಸಂದೇಶಗಳನ್ನು ಹೊಂದಿರುವ ವಿಡಿಯೋವನ್ನು ತಮ್ಮ ಇಲಾಖೆ ಬಿಡುಗಡೆ ಮಾಡುತ್ತದೆ" ಎಂದು ತಿಳಿಸಿದ್ದಾರೆ.
"ಜೂನ್ 21ರ ಯೋಗ ದಿನಾಚರಣೆಯ ವೇಳೆ ರಾಜ್ಯ ವ್ಯಾಕ್ಸಿನೇಷನ್ ಮೇಳವನ್ನು ಕೂಡಾ ಆಯೋಜಿಸುತ್ತದೆ. ವ್ಯಾಕ್ಸಿನೇಷನ್ ಮೇಳದಲ್ಲಿ 18-44 ವರ್ಷ ವಯಸ್ಸಿನವರು, 45 ವರ್ಷಕ್ಕಿಂತ ಮೇಲ್ಪಟ್ಟವರು, ಮುಂಚೂಣಿ ಕಾರ್ಮಿಕರು ಸೇರಿದಂತೆ ದುರ್ಬಲ ಗುಂಪುಗಳಿಗೆ ಲಸಿಕೆಗಳನ್ನು ನೀಡಲಾಗುತ್ತದೆ. ನಮ್ಮಲ್ಲಿ ಒಟ್ಟು 14 ಲಕ್ಷ ಕೋವಿಶೀಲ್ಡ್ ಲಸಿಕೆಗಳ ಸಂಗ್ರಹವಿದ್ದು, ಜೂನ್ 21ರಂದು ಏಳು ಲಕ್ಷ ಲಸಿಕೆಗಳನ್ನು ನೀಡುವ ಗುರಿ ಹೊಂದಿದ್ದೇವೆ" ಎಂದಿದ್ದಾರೆ.
"ರಾಜ್ಯದಲ್ಲಿ ಇಲ್ಲಿಯವರೆಗೆ 1.80 ಕೋಟಿ ಇನಾಕ್ಯುಲೇಷನ್ ಮಾಡಲಾಗಿದೆ. ದೇಶದಲ್ಲಿ ನೀಡಲಾಗುವ ಪ್ರತೀ 15 ಡೋಸ್ಗಳಿಗೆ ಒಂದು ಡೋಸ್ ಕರ್ನಾಟಕದಿಂದ ಬಂದಿದೆ" ಎಂದು ತಿಳಿಸಿದ್ದಾರೆ.