ಮೈಸೂರು, ಜೂ 20 (DaijiworldNews/PY): "ಇವರಿಗೆ ನಮ್ಮ ತ್ಯಾಗದಿಂದಲೇ ಅಧಿಕಾರ ಸಿಕ್ಕಿರುವುದು. ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವ ಸರ್ಕಾರ ರಚನೆಯಾಗಿರುವುದು" ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
"ನಿಗಮ-ಮಂಡಳಿ ಅಧ್ಯಕ್ಷರು ಇದೀಗ ಅಧಿಕಾರ ಅನುಭವಿಸುತ್ತಿರುವುದು ಯಾರಿಂದ ಎನ್ನುವುದನ್ನು ಅರ್ಥ ಮಾಡಿಕೊಂಡು ಮಾತನಾಡಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು" ಎಂದು ನಿಗಮ-ಮಂಡಳಿ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ.
"ಅಳಿಯನ ವಿಚಾರದಲ್ಲಿ ಯಾವುದೇ ರೀತಿಯಾದ ಲಾಬಿ ಮಾಡಿಲ್ಲ. ಚೀಫ್ ಇಂಜಿನಿಯರ್ ಆಗಿದ್ದ ಅಳಿಯನನ್ನು ಸರ್ಕಾರ ವರ್ಗಾವಣೆ ಮಾಡಿ 10 ತಿಂಗಳಿನಿಂದ ಪರ್ಯಾಯ ಸ್ಥಳ ತೋರಿಸದೇ ಮನೆಯಲ್ಲಿಯೇ ಉಳಿಯುವಂತೆ ಮಾಡಿದೆ. ಈ ವಿಷಯದ ಬಗ್ಗೆ ಪ್ರಶ್ನಿಸುವುದರಲ್ಲಿ ಏನು ತಪ್ಪು?. ಸರ್ಕಾರಿ ಅಧಿಕಾರಿಯನ್ನು ವರ್ಗಾವಣೆ ಮಾಡುವ ಅಧಿಕಾರ ಸರ್ಕಾರಕ್ಕೆ ಇದ್ದರೆ ಪರ್ಯಾಯ ಸ್ಥಳವನ್ನು ನೀಡಬೇಕಾದ ಜವಾಬ್ದಾರಿಯೂ ಇರಬೇಕಲ್ಲವೇ?. ಈ ವಿಚಾರದಲ್ಲಿ ಸರ್ಕಾರ ಎಡವಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.