ಬೆಂಗಳೂರು,ಜೂ. 19 (DaijiworldNews/HR): "ಕರ್ನಾಟಕದಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವಂತ 16 ಜಿಲ್ಲೆಗಳಲ್ಲಿ ಅನ್ಲಾಕ್ ಮಾಡಲಾಗುತ್ತಿದ್ದು, ಇನ್ನುಳಿದಂತೆ ಪಾಸಿಟಿವಿಟಿ ದರಗಳು ಹೆಚ್ಚಿರುವಂತ 13 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಸಲಾಗುತ್ತಿದ್ದು, ಜುಲೈ 5ರ ವರೆಗೆ ಈ ಹೊಸ ಮಾರ್ಗಸೂಚಿ ಮುಂದುವರಿಯಲಿದೆ" ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಈ ಕುರಿತು ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಕೊರೊನಾ ಉಸ್ತುವಾರಿ ಸಚಿವರು, ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಶೇ.5ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವಂತ 13 ಜಿಲ್ಲೆಗಳಾದಂತ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಧಾರವಾಡ, ಕೊಡಗು ಬಳ್ಳಾರಿ, ಚಿತ್ರದುರ್ಗ, ವಿಜಯಪುರ ಜಿಲ್ಲೆಗಳಲ್ಲಿ ಈ ಹಿಂದಿನ ಆದೇಶವೇ ಮುಂದುವರೆಯಲಿದೆ" ಎಂದರು.
ಇನ್ನು ಕಳೆದ ಒಂದು ವಾರದಲ್ಲಿ 16 ಜಿಲ್ಲೆಗಳಲ್ಲಿ ಶೇ.5ಕ್ಕಿಂತ ಕಡಿಮೆ ಪಾಸಿಟಿವ್ ದರ ಇದ್ದು, ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ ಸೇರಿದಂತೆ ಗದಗ, ರಾಯಚೂರು, ಬಾಗಲಕೋಟೆ, ಕಲಬುರ್ಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ, ಈ ಕೆಳಕಂಡಂತೆ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ" ಎಂದಿದ್ದಾರೆ.
ಅನ್ಲಾಕ್ ಮಾಡಲಾಗಿರುವ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ಬೆಳಿಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದ್ದು, ಎಸಿ ಚಾಲನೆಗೊಳಿಸದೇ ಹೋಟೆಲ್, ಕ್ಲಬ್, ರೆಸ್ಟೋರೆಂಟ್ ಗಳಲ್ಲಿ ಮಧ್ಯಪಾನ ಹೊರತುಪಡಿಸಿ ಸಂಜೆ 5 ಗಂಟೆಯವರೆಗೆ ಶೇ.50ರಷ್ಟು ಜನರನ್ನು ಒಳಗೊಂಡು ತೆರೆಯೋದಕ್ಕೆ ಅವಕಾಶ ನೀಡಲಾಗಿದೆ.
ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಲಾಗಿದ್ದು, ಬಸ್ ಮತ್ತು ಮೆಟ್ರೋಗೆ ಶೇ.50ರಷ್ಟು ಜನರೊಂದಿಗೆ ಕಾರ್ಯಾಚರಣೆಗೆ ಅವಕಾಶ ನೀಡಲಾಗಿದೆ. ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಲಾಡ್ಜ್, ರೆಸಾರ್ಟ್ ಶೇ.50ರಷ್ಟು ಜನರೊಂದಿಗೆ ತೆರೆಯಬಹುದಾಗಿದ್ದು, ಜಿಮ್ ಗಳಲ್ಲಿ ಹವಾನಿಯಂತ್ರಣ ಇಲ್ಲದೇ ಅವಕಾಶ ನೀಡಲಾಗಿದೆ.