ಬೆಂಗಳೂರು, ಜೂ 19 (DaijiworldNews/PY): "ಪ್ರಧಾನಿ ನರೇಂದ್ರ ಮೋದಿ ಪೌರುಷವೇನಿದ್ದರೂ ಪಾಕಿಸ್ತಾನದ ವಿರುದ್ಧ ಅಷ್ಟೆ. ಉಳಿದಂತೆ ಚೀನಾದ ದೊರೆಗಳಿರಲಿ, ಕರ್ನಾಟಕದ ಸ್ವಪಕ್ಷೀಯ ಬಂಡುಕೋರ ಮರಿಗಳಿರಲಿ. ಮೋದಿಯವರದ್ದು ಉತ್ತರಕುಮಾರನ ಪೌರುಷ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಅವರು, "ಭದ್ರಾ ಮೇಲ್ದಂಡೆ ಕಾಮಗಾರಿಯ ರೂ. 20,000 ಕೋಟಿ ಟೆಂಡರ್ ನಲ್ಲಿ ಬಿ.ವೈ ವಿಜಯೇಂದ್ರ 10% ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಶಾಸಕ ಎಚ್.ವಿಶ್ವನಾಥ್ ಆರೋಪವನ್ನು ಭ್ರಷ್ಟಾಚಾರ ನಿರೋಧ ದಳ (ಎಸಿಬಿ)ದ ತನಿಖೆಗೆ ಒಪ್ಪಿಸಬೇಕು ಎಂದು ಸಿಎಂ ಬಿಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ" ಎಂದಿದ್ದಾರೆ.
"ಎರಡು ಕಾರಣಗಳಿಗಾಗಿ ಈ ಆರೋಪ ಗಂಭೀರ ಸ್ವರೂಪದ್ದಾಗಿದೆ. ಮೊದಲನೆಯದಾಗಿ ಆರೋಪ ನೇರವಾಗಿ ಸಿಎಂ ಬಿಎಸ್.ಯಡಿಯೂರಪ್ಪ ಅವರ ಮಗನ ಮೇಲಿದೆ. ಎರಡನೆಯದಾಗಿ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿದ್ದಾರೆ. ತರಾತುರಿಯಲ್ಲಿ ನೀರಾವರಿ ಇಲಾಖೆ ಸ್ಪಷ್ಟನೆ ನೀಡಿದ್ದನ್ನು ನೋಡಿದರೆ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಸ್ಪಷ್ಟವಾಗಿದೆ" ಎಂದು ತಿಳಿಸಿದ್ದಾರೆ.
"ನಗರದ ಬಿಐಇಸಿಯಲ್ಲಿ ನಿರ್ಮಿಸಲಾಗಿದ್ದ ಕೋವಿಡ್ ಕೇರ್ ಸೆಂಟರ್ ನ ಹಾಸಿಗೆ ಮತ್ತು ಬೆಡ್ ಗಳ ಖರೀದಿ-ಮಾರಾಟದಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಭ್ರಷ್ಟಾಚಾರ ಎಸಗಿದ್ದಾರೆ ಮತ್ತು ಭೂಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಎಚ್.ವಿಶ್ವನಾಥ್ ಅವರ ಇನ್ನೊಂದು ಆರೋಪದ ಬಗ್ಗೆಯೂ ತನಿಖೆ ನಡೆಯಬೇಕು" ಎಂದು ಒತ್ತಾಯಿಸಿದ್ದಾರೆ.
"ಈಗಿನ ಬಿಜೆಪಿ ಸರ್ಕಾರದ ರೂವಾರಿಯೇ ತಾನೆಂದು ಹೇಳಿಕೊಳ್ಳುತ್ತಿರುವ ಶಾಸಕ ಎಚ್.ವಿಶ್ವನಾಥ್ ಅವರೇ ಈ ಸರ್ಕಾರವನ್ನು ‘ಗುತ್ತಿಗೆದಾರರ ಸರ್ಕಾರ’ ಎಂದು ಬಣ್ಣಿಸಿರುವುದು ನೋಡಿದರೆ ಅವರ ಬಳಿ ಬೇರೆ ಸಚಿವರ ಭ್ರಷ್ಟಾಚಾರದ ಮಾಹಿತಿಯೂ ಇದ್ದ ಹಾಗಿದೆ. ಎಸಿಬಿ ಅವರನ್ನೂ ಕರೆದು ವಿಚಾರಣೆಗೆ ಒಳಪಡಿಸಿದರೆ ಸತ್ಯ ಬಯಲಿಗೆ ಬರಬಹುದು" ಎಂದಿದ್ದಾರೆ.
ಮುಖ್ಯಮಂತ್ರಿಗಳು ಮತ್ತು ಮಗನ ವಿರುದ್ಧದ ಆರೋಪ ಇದೇ ಮೊದಲ ಬಾರಿ ಕೇಳಿಬಂದದ್ದಲ್ಲ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಒಂದು ವರ್ಷದಿಂದ ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಗೈಯ್ಯುತ್ತಾ ಬಂದಿದ್ದಾರೆ. ಇನ್ನೊಬ್ಬ ಶಾಸಕ ಸಿ.ಪಿ.ಯೋಗೀಶ್ವರ್ ಅವರೂ ಇದಕ್ಕೆ ದನಿಗೂಡಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಯಬೇಕು" ಎಂದು ಹೇಳಿದ್ದಾರೆ.
"ಮುಖ್ಯಮಂತ್ರಿಗಳು ಮತ್ತು ಅವರ ಮಗನ ವಿರುದ್ಧ ಬಹಿರಂಗವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಶಾಸಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳದೆ ಮೌನವಾಗಿರುವುದು ನೋಡಿದರೆ ಒಂದೋ ಬಿಜೆಪಿ ಹೈಕಮಾಂಡ್ ಈ ಆರೋಪಗಳನ್ನು ಒಪ್ಪಿಕೊಂಡಿದೆ, ಇಲ್ಲವೇ ಭ್ರಷ್ಟಾಚಾರದ ಹೇಸಿಗೆಯಲ್ಲಿ ಅದೂ ಕೂಡಾ ಪಾಲು ಪಡೆದಿದೆ ಎಂದೇ ಅರ್ಥವಲ್ಲವೇ?" ಎಂದು ಪ್ರಶ್ನಿಸಿದ್ದಾರೆ.
"ರಾಜ್ಯ ಬಿಜೆಪಿ ಸರ್ಕಾರದ ಭಿನ್ನಮತ ಶಮನಕ್ಕೆ ಬಂದಿದ್ದ ಹೈಕಮಾಂಡ್ನ ಬಡಪಾಯಿ ಪ್ರತಿನಿಧಿಯ ಕೆಲಸ ‘ಬಂದ ಪುಟ್ಟಾ..ಹೋದ ಪುಟ್ಟಾ’ ಎಂಬಂತಾಗಿದೆ. ಈ ಪ್ರತಿನಿಧಿ ಜಗಳ ಬಿಡಿಸಲು ಬಂದಿದ್ದಾ? ಜಗಳ ಹಚ್ಚಲು ಬಂದಿದ್ದಾ?" ಎಂದು ಕೇಳಿದ್ದಾರೆ.