ಬೆಂಗಳೂರು, ಜೂ 19 (DaijiworldNews/PY): ವಿಧಾನ ಸೌಧದ ಪಕ್ಕದಲ್ಲಿರುವ ರಾಜ ಭವನದ ಉದ್ಯಾನವನದ ಅಲಂಕಾರಕ್ಕೆ ಮೂರು ವರ್ಷಗಳಲ್ಲಿ 4.80 ಲಕ್ಷ ರೂ. ಖರ್ಚು ಮಾಡಲಾಗಿದೆ. ರಾಜ ಭವನದ ಉದ್ಯಾನವನ್ನು ನಿರ್ವಹಿಸಲು 3.27 ಕೋಟಿ ರೂ. ಅನ್ನು ಸಾರ್ವಜನಿಕ ಹಣವನ್ನು ಬಳಕೆ ಮಾಡಲಾಡಗಿದೆ ಎದು ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗಪಡಿಸಲಾಗಿದೆ.
ಮೂರು ವರ್ಷಗಳಲ್ಲಿ ರಾಜ ಭವನ ತೋಟದಲ್ಲಿ ಕೆಲಸ ಮಾಡುವ ದಿನನಿತ್ಯದ ಕಾರ್ಮಿಕರಿಗೆ 11.59 ಲಕ್ಷ ರೂ., ಮಾಸ್ಟರ್ ಪ್ಲ್ಯಾನ್ ಹಾಗೂ ಉದ್ಯಾನದ ಅಭಿವೃದ್ದಿಗೆ 2.95 ಕೋಟಿ ರೂ., ತರಕಾರಿ ಬೀಜಗಳಿಗೆ 15 ಲಕ್ಷ ರೂ, ರಸಗೊಬ್ಬರಗಳು, ಕೆಂಪು ಮಣ್ಣು, ಬ್ರಷ್ ಕಟ್ಟರ್ ಹಾಗೂ ಪವರ್ ಟಿಲ್ಲರ್ಗೆ 52,000 ರೂ., ರಾಜಭವನದ ಗವರ್ನರ್ ನಿವಾಸ, ಡೈನಿಂಗ್ ಹಾಲ್, ಮುಖ್ಯ ಕಚೇರಿ, ವಿಐಪಿ ಲಾಂಜ್ ಮುಂತಾದ ಕಡೆಗಳಲ್ಲಿ ಹೂವುಗಳ ಅಲಂಕಾರಕ್ಕೆ 4.80 ಲಕ್ಷ ರೂ. ಸೇರಿದಂತೆ 3.27 ಕೋಟಿ ರೂ. ಖರ್ಚಾಗಿದೆ.
ಆರ್ಟಿಐ ಅಡಿಯಲ್ಲಿ ಈ ಮಾಹಿತಿ ಕೋರಿ ಅರ್ಜಿ ಸಲ್ಲಿಸಿರುವ ಭೀಮಪ್ಪ ಗಡದ್ ರಾಜ್ಯ ಸರ್ಕಾರದ ಬೊಕ್ಕಸದಿಂದ ಇಷ್ಟು ಹಣವನ್ನು ಉದ್ಯಾನವನದ ಅಭಿವೃದ್ದಿಗೆ ಖರ್ಚು ಮಾಡಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಕೇವಲ ಹೂವುಗಳ ಮಡಕೆ ಅಲಂಕಾರಕ್ಕೆ 5 ಲಕ್ಷ ರೂ. ಖರ್ಚು ಮಾಡಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದೇನೆ ಎಂದಿದ್ದಾರೆ.
ರಾಜ್ಯಪಾಲ ವಾಜುಭಾಯ್ ವಾಲಾ ಅವರು 2014 ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಸಾರ್ವಜನಿಕ ಭೇಟಿಗೆ ಅವಕಾಶ ನೀಡಿರುವುದಕ್ಕೆ ಗಡದ್ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಪಾಲರು ಜನರ ಸಂಕಷ್ಟಗಳಿಗೆ ಯಾವ ಮಟ್ಟದಲ್ಲಿ ಎಷ್ಟು ಸ್ಪಂದಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ರಾಜ ಭವನದ ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದ ಅವರು, ಅಲ್ಲಿನ ಅಧಿಕಾರಿಗಳು ಜನಸ್ನೇಹಿ ಅಲ್ಲ ಎಂದು ದೂರಿದ್ದಾರೆ.