ಬೆಂಗಳೂರು,ಜೂ. 19 (DaijiworldNews/HR): ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಸಾವನ್ನಪ್ಪಿದವರ ಲೆಕ್ಕವನ್ನೂ ಸರ್ಕಾರಕ್ಕೆ ಸರಿಯಾಗಿ ಕೊಡಲಾಗುತ್ತಿಲ್ಲ. ಸುಳ್ಳು ಲೆಕ್ಕಗಳನ್ನು ಕೊಟ್ಟು ಮೃತಪಟ್ಟವರ ಸಂಖ್ಯೆಯನ್ನೂ ಮುಚ್ಚಿಡಲಾಗುತ್ತಿದೆ. ಜನರು ಬದುಕಿಗಾಗಿ ಹೋರಾಟ ನಡೆಸಿದ್ದರೆ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ಕಿತ್ತಾಡುತ್ತಿದ್ದಾರೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕರ್ನಾಟಕದಲ್ಲಿ ಅನೇಕ ಮಂದಿ ಇಂದು ಉದ್ಯೋಗಕ್ಕಾಗಿ ಪರದಾಡುತ್ತಿದ್ದು, ಬಿಜೆಪಿ ಯುದ್ಧಕಾಂಡ ಜನರ ಕರ್ಮಕಾಂಡ ಎಂಬಂತಾಗಿದೆ ಈಗೀನ ರಾಜ್ಯದ ಪರಿಸ್ಥಿತಿ. ದುರಾಡಳಿತ, ಭ್ರಷ್ಟಾಚಾರ, ಅಧಿಕಾರಕ್ಕಾಗಿ ಕಿತ್ತಾಟದಲ್ಲೇ ಬಿಜೆಪಿ ನಾಯಕರು ಕಾಲಹರಣ ಮಾಡುತ್ತಿದ್ದಾರೆ. ಮೊದಲು ವಿಧಾನಮಂಡಲ ಅಧಿವೇಶನ ಕರೆದು ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದರ ಬಗ್ಗೆ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಸಬೇಕಿದೆ" ಎಂದರು.
ಇನ್ನು ಕರ್ನಾಟಕದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಬಗ್ಗೆ ಸರ್ಕಾರ ಸರಿಯಾಗಿ ಮಾಹಿತಿ ನೀಡದೇ ಸುಳ್ಳು ಲೆಕ್ಕ ನೀಡುತ್ತಿದ್ದು, ಕೊರೊನಾ ಸಾವಿನ ಲೆಕ್ಕವೇ ಸರಿಯಾಗಿ ಆಡಿಟ್ ಆಗುತ್ತಿಲ್ಲ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಡೀಟ್ ಮಾಡಿ, ಸಾವಿನ ಪ್ರಮಾಣಪತ್ರ ಸೇರಿ ಎಲ್ಲಾ ಮಾಹಿತಿ ಕಲೆ ಹಾಕಿ" ಎಂದು ಕರೆ ನೀಡಿದ್ದಾರೆ.