ಬೆಂಗಳೂರು, ಜೂ 19 (DaijiworldNews/PY): ಸರಕಾರ, ಪ್ರಸ್ತುತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಅಧಿಕೃತ ಸೂಚನೆ ಹೊರಡಿಸಿದ್ದು, ಕನಿಷ್ಠ ಅಂಕ ನೀಡಿ ಎಲ್ಲರನ್ನು ಉತ್ತೀರ್ಣಗೊಳಿಸಲು ಸೂಚಿಸಿದೆ. ಅಲ್ಲದೇ, ಮರು ಮೌಲ್ಯಮಾಪನ ಇರುವುದಿಲ್ಲ ಎಂದಿದೆ. ಪರೀಕ್ಷೆ ದಿನಾಂಕವನ್ನು ಪ್ರಕಟಿಸಬೇಕಿದೆ.
2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಕನಿಷ್ಠ ಉತ್ತೀರ್ಣತೆಯ ಅಂಕ ನೀಡಿ, ವಿದ್ಯಾರ್ಥಿಗಳು ಪಡೆಯುವ ಅಂಕದ ಆಧಾರದ ಮೇಲೆ ಶ್ರೇಣಿ ನೀಡುವಂತೆ ಸೂಚನೆ ನೀಡಲಾಗಿದೆ.
90-100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎ+, 80-89 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಎ, 60-79 ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿ ಹಾಗೂ 35-59 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಿ ಶ್ರೇಣಿಯನ್ನು ನೀಡಲು ಸೂಚನೆ ನೀಡಿದೆ. ಪ್ರತೀ ವಿಷಯದ ಪರೀಕ್ಷೆಯು 40 ಅಂಕಗಳಿಗೆ ನಡೆಯಲಿದೆ. ಬಳಿಕ ಅವುಗಳನ್ನು 80 ಅಂಕಗಳಿಗೆ ಪರಿವರ್ತಿಸಬೇಕು. ಒಟ್ಟು 125 ಅಂಕಕ್ಕೆ ಅನುಗುಣವಾಗಿ ಫಲಿತಾಂಶ ನೀಡುವಂತೆ ಸೂಚನೆ ನೀಡಿದೆ.
2020-21ನೇ ಸಾಲಿಗೆ ಮಾತ್ರವೇ ಇದು ಸೀಮಿತವಾಗಿರಲಿದೆ. ಎಸ್ಸೆಸ್ಸೆಲ್ಸಿಗೆ ಪರೀಕ್ಷೆಗೆ ಸಂಬಂಧಿಸಿದಂತೆ ಛಾಯಾಪ್ರತಿ ಸೇರಿದಂತೆ ಅಂಕಗಳ ಮರು ಎಣಿಕೆ, ಮರು ಮೌಲ್ಯಮಾಪ ಇರುವುದಿಲ್ಲ. ಕೊರೊನಾ ಕಾರಣಕ್ಕೆ ಅನಾರೋಗ್ಯದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೇ ಇದ್ದ ವಿದ್ಯಾರ್ಥಿಗಳಿಗೆ ಮೊದಲ ಅವಕಾಶ ಎಂದು ಮರು ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷೆಯಲ್ಲಿ ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳು ಆಗಿರಲಿವೆ. ಒಟ್ಟು 8.77 ಲಕ್ಷ ವಿದ್ಯಾರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ.
ಪ್ರಸ್ತುತ 6 ಸಾವಿರ ಪರೀಕ್ಷಾ ಕೇಂದ್ರಗಳಿರಲಿವೆ. ಒಂದು ಬೆಂಚಿನಲ್ಲಿ ಓರ್ವ ವಿದ್ಯಾರ್ಥಿ, ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳನ್ನು ಕುಳ್ಳಿರಿಸಲಾಗುತ್ತದೆ. ಕೊರೊನಾ ನಿಯಮಗಳನ್ನು ಪಾಲಿಸಲಾಗುತ್ತದೆ. ಅಲ್ಲದೇ, ಪರೀಕ್ಷಾ ಪ್ರಕ್ರಿಯೆಲ್ಲಿ ಪಾಲ್ಗೊಳ್ಳುವ ಎಲ್ಲಾ ಸಿಬ್ಬಂದಿಗಳು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ.