ದಾವಣಗೆರೆ, ಜೂ 19 (DaijiworldNews/PY): "ಒಂದು ರಾಜಕೀಯ ಪಕ್ಷ ಎಂದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಬಿಜೆಪಿ ಒಂದು ಕುಟುಂಬ ಇದ್ದಂತೆ. ಒಂದು ರಾಜಕೀಯ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತದೆ. ಅರುಣ್ ಸಿಂಗ್ ಅವರು ನಮ್ಮ ಅಭಿಪ್ರಾಯಗಳನ್ನು ಹೇಳುವಂತ ಅವಕಾಶ ನೀಡಿದ್ದಾರೆ. ಇದೊಂದು ವಿಶೇಷ ಪದ್ದತಿಯಾಗಿದ್ದು, ಈ ವಿಶೇಷ ಪದ್ದತಿ ಯಾವ ಪಕ್ಷದಲ್ಲೂ ಇಲ್ಲ" ಎಂದು ಹೇಳಿದ್ದಾರೆ.
"ಸಭೆಯಲ್ಲಿ ಕೇವಲ ನಾಯಕತ್ವದ ಬಗ್ಗೆ ಚರ್ಚೆ ಆಗಿಲ್ಲ. ಕೊರೊನಾ ಸಂಕಷ್ಟದ ವೇಳ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ಆಗಿದೆ. ಮೂರನೇ ಅಲೆ ಬಂದರೆ ಏನು ಮಾಡಬೇಕು, ಪಕ್ಷವನ್ನು ಶಕ್ತಿಶಾಲಿಯನ್ನಾಗಿ ಮಾಡಬೇಕು. ಮುಂದಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಅರುಣ್ ಸಿಂಗ್ ಅವರು ನಮ್ಮ ಅಭಿಪ್ರಾಯ ಹೇಳುವಂತ ಅವಕಾಶ ಕೊಟ್ಟಿದ್ದರು" ಎಂದಿದ್ದಾರೆ.
"ಅರುಣ್ ಸಿಂಗ್ ಬಂದ ವೇಳೆ ಸಿಎಂ ಅವರ ವಿಚಾರವನ್ನೇ ಚರ್ಚೆ ಮಾಡಿದ್ದಾರೆ ಎಂದಲ್ಲ. ಗೊಂದಲ ಇರುವ ವ್ಯಕ್ತಿಗಳೊಂದಿಗೆ ಕುಳಿತು ಚರ್ಚಿಸಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಕೊರೊನಾ ನಿರ್ವಹಣೆ, ಯೋಗ ದಿನಾಚರಣೆಯ ಬಗ್ಗೆ ಚರ್ಚೆ ಮಾಡಲಾಗಿದೆ. ನಾಯಕತ್ವ ಬದಲಾವಣೆ ಮುಗಿದ ವಿಚಾರವಾಗಿದೆ" ಎಂದು ತಿಳಿಸಿದ್ದಾರೆ.
"ಸಿಎಂ ಹಾಗೂ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ ಟೆಂಡರ್ ಬಗ್ಗೆಉತ್ತರಿಸಿದ್ದಾರೆ. ಈ ಬಗ್ಗೆ ಚರ್ಚೆಯ ಅವಶ್ಯಕತೆ ಇಲ್ಲ. ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಡಿಸೆಂಬರ್ ತನಕ ನಡೆಯುವುದಿಲ್ಲ. ಕೊರೊನಾ ಮೂರನೇ ಅಲೆಯ ಭೀತಿ ಇರುವ ಹಿನ್ನೆಲೆ ಸದ್ಯಕ್ಕೆ ಚುನಾವಣೆ ಬೇಡ ಎಂದು ಸರ್ಕಾರ ತೀರ್ಮಾನ ಕೈಗೊಂಡಿದೆ. ಲಾಕ್ಡೌನ್ ವಿಸ್ತರಣೆ ಬಗ್ಗೆ ಸೋಮವಾರ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಂದು ಮುಖ್ಯಮಂತ್ರಿ ನೇತೃತ್ವದ ಸಭೆ ನಡೆಯಲಿದೆ" ಎಂದಿದ್ದಾರೆ.