ನವದೆಹಲಿ, ಜೂ 19(DaijiworldNews/MS): ಜಾಗತಿಕ ಜನಪ್ರಿಯ ನಾಯಕ ವಿಚಾರದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕದ ಅಧ್ಯಕ್ಷ ಜೋ ಬೈಡೆನ್, ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರನ್ನೂ ಮೀರಿಸಿದರೂ, ಅವರ ಈ ಹಿಂದಿನ ಜನಪ್ರಿಯತೆಯ ರೇಟಿಂಗ್ ನಲ್ಲಿ ಕುಸಿತ ಕಂಡಿದೆ.
2019ರ ಆಗಸ್ಟ್ ಗೆ ಹೋಲಿಸಿದರೆ ಈಗ ಪ್ರಧಾನಿ ಮೋದಿ ಅವರ ಒಪ್ಪಿಗೆಯ ಅಂತರ ಕಡಿಮೆಯಾಗಿದೆ. ಆಗ ಭಾರತದಲ್ಲಿ ಮೋದಿ ನಾಯಕತ್ವವನ್ನು ಶೇ. 82ರಷ್ಟು ಮಂದಿ ಒಪ್ಪಿಕೊಂಡಿದ್ದರು. ಶೇ. 11ರಷ್ಟು ಮಾತ್ರ ಅಸಮಾಧಾನ ಹೊಂದಿದ್ದರು.ಈಗ ಶೇ. 66ರಷ್ಟು ಮಂದಿ ಮೋದಿ ಅವರ ನಾಯಕತ್ವದ ಬಗ್ಗೆ ಮೆಚ್ಚುಗೆ ಹೊಂದಿದ್ದಾರೆ. ಶೇ. 28ರಷ್ಟು ಮಂದಿ ಅತೃಪ್ತಿ ಹೊಂದಿದ್ದಾರೆ. ಆದರೂ ಜಾಗತಿಕ ಮಟ್ಟದ ಎಲ್ಲ ನಾಯಕರಿಗಿಂತ ಮೋದಿ ಮುಂಚೂಣಿಯಲ್ಲಿದ್ದಾರೆ. 2021 ರ ಮೇ 10 ರಂದು ಭಾರತದಲ್ಲಿ ಕೊರೊನಾ ವೈರಸ್ ಎರಡನೇ ಉತ್ತುಂಗದಲ್ಲಿದ್ದಾಗ ಪ್ರಧಾನಿ ಮೋದಿಯ ಅಸಮ್ಮತಿ ರೇಟಿಂಗ್ 32 ಶೇಕಡಾ ತಲುಪಿ ಬಳಿಕ ಇದು ಸುಧಾರಣೆಯಾಗಿದೆ.
ಜಾಗತಿಕ ನಾಯಕರ ಜನಪ್ರಿಯತೆಯ ಬಗ್ಗೆ ಅಮೆರಿಕದ ಮಾರ್ನಿಂಗ್ ಕನ್ಸಲ್ಟ್ ಎಂಬ ಸಂಸ್ಥೆ 13 ದೇಶಗಳಲ್ಲಿ ಈ ಸಮೀಕ್ಷೆ ನಡೆಸಿದೆ. ತಮ್ಮ ನಾಯಕರ ಬಗ್ಗೆ ಅಲ್ಲಿನ ದೇಶದ ಜನ ಹೊಂದಿರುವ ಅಭಿಪ್ರಾಯಗಳನ್ನು ಕ್ರೋಡೀಕರಿಸಿದೆ. ಆದಾಗ್ಯೂ, ಸಮೀಕ್ಷೆಯು 1.3 ಬಿಲಿಯನ್ ಜನರ ದೇಶವಾದ ಭಾರತದಲ್ಲಿ 2,126 ವಯಸ್ಥರನ್ನು ಮಾತ್ರ ಸಂಪರ್ಕಿಸಿದೆ.
ಇಟಲಿ ಪ್ರಧಾನಿ ಮಾರಿಯೋ ಡ್ರಾ (ಶೇ.65), ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಮ್ಯಾನ್ಯುವಲ್ ಲೋಪಸ್ ಒಬ್ರೆ ಡಾರ್ (ಶೇ.63), ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ (ಶೇ.54), ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ (ಶೇ.53), ಅಮೆರಿಕ ಅಧ್ಯಕ್ಷ ಜೋ ಬೈಡೆನ್ (ಶೇ.53), ಕೆನಡಾ ಪ್ರಧಾನಿ ಜಸ್ಟಿನ್ ತ್ರುದೌ (ಶೇ.48), ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ (ಶೇ.44), ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೋ ಇನ್ (ಶೇ.37), ಸ್ಪೈನ್ನ ಪೆಡ್ರೋ ಸಾಂಕೋಝ್ (ಶೇ.36), ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸಾ ನೋರೋ (ಶೇ.35), ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ (ಶೇ.35) ಜಪಾನ್ ಪ್ರಧಾನಿ ಯೋಶಿಹೈಡ್ ಸುಗಾ (ಶೇ.29)ಜನರಿಂದ ಒಪ್ಪಿಗೆ ಪಡೆದಿದ್ದಾರೆ.