ಕೊಚ್ಚಿ, ಜೂ 19(DaijiworldNews/MS): ಅರಬ್ಬಿ ಸಮುದ್ರದ ಕೇರಳದ ಕರಾವಳಿ ಬಳಿ ಇದುವರೆಗೆ ಕಂಡುಬಾರದೆ ಇರುವ ಹುರಳಿಕಾಯಿ ಆಕಾರದ ದ್ವೀಪವೊಂದು ಇರುವುದು ಗೂಗಲ್ ಅರ್ತ್ನಲ್ಲಿ ಕಂಡು ಬಂದಿದ್ದು, ಇದರ ಸ್ಕ್ರೀನ್ಶಾಟ್ ಒಂದು ವೈರಲ್ ಆಗಿದೆ.
ಈ ಹಿಂದೆ ಎಂದೂ ಸಹ ಕಾಣದ ಈ ದ್ವೀಪವು ಕೊಚ್ಚಿ ನಗರದ ವಿಸ್ತೀರ್ಣದಷ್ಟಿದೆ ಎನ್ನಲಾಗಿದೆ. ಗೂಗಲ್ ಅರ್ತ್ ಚಿತ್ರಗುಚ್ಛದಲ್ಲಿ ಈ ದ್ವೀಪ ಕಂಡರೂ ಭೌತಿಕವಾಗಿ ದ್ವೀಪ ಕಾಣಸಿಕ್ಕಿಲ್ಲ.ಇದು ನೀರೊಳಗಿನ ರಚನೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಇದು ತಜ್ಞರು ಸೇರಿದಂತೆ ಅನೇಕರ ಆಸಕ್ತಿ ಕೆರಳಿಸಿದೆ.
ಚೆಲ್ಲಂ ಕಾರ್ಷಿಕಾ ಪ್ರವಾಸೋದ್ಯಮ ಅಭಿವೃದ್ಧಿ ಸೊಸೈಟಿ ಎಂಬ ಸಂಸ್ಥೆ ಅಧಿಕಾರಿಗಳಿಗೆ ಪತ್ರ ಬರೆದ ನಂತರ ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿಶ್ವವಿದ್ಯಾಲಯದ (ಕುಫೋಸ್) ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಯೋಜಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಈ ರಚನೆಯನ್ನು ಗಮನಿಸಿದ್ದು ಅದು ಗಾತ್ರದಲ್ಲಿ ವಿಸ್ತರಿಸುತ್ತಿರುವುದನ್ನು ನೋಡಿಲ್ಲ ಎಂದು ಸಂಘಟನೆಯ ಪ್ರತಿನಿಧಿ ಹೇಳಿದ್ದಾರೆ.
ಸಂಘಟನೆಯ ಅಧ್ಯಕ್ಷ ಕೆಎಕ್ಸ್ ಜುಲಪ್ಪನ್ ಅವರು 2021 ರ ಜೂನ್ 5 ರಂದು ಫೇಸ್ಬುಕ್ ಪೋಸ್ಟ್ನಲ್ಲಿ ಗೂಗಲ್ ನಕ್ಷೆಯ ಚಿತ್ರಣದ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಗೂಗಲ್ ನಕ್ಷೆಗಳ ಚಿತ್ರದ ಆಧಾರದ ಮೇಲೆ 8 ಕಿ.ಮೀ ಉದ್ದ ಮತ್ತು 3.5 ಕಿ.ಮೀ ಅಗಲವಿದೆ.
ಫೇಸ್ಬುಕ್ನಲ್ಲಿ ಈ ಚಿತ್ರವನ್ನು ನೆಟ್ಟಿಗರೊಬ್ಬರು ಶೇರ್ ಮಾಡಿಕೊಂಡಿದ್ದು, ಇವರು ಪ್ರವಾಸೋದ್ಯಮ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ಇವರು ಹಾಕಿದ ಪೋಸ್ಟ್ ಫೇಸ್ಬುಕ್ನಲ್ಲಿ ವೈರಲ್ ಆದ ಬಳಿಕ ಕೇರಳ ಮೀನುಗಾರಿಕೆ ಹಾಗೂ ಸಾಗರಿಕ ಅಧ್ಯಯನ ವಿವಿಯ ಗಮನ ಸೆಳೆದಿದ್ದು, ಈ ಸಂಬಂಧ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.