ಬೆಂಗಳೂರು, ಜೂ. 18 (DaijiworldNews/SM): ಕೊರೋನಾದಿಂದಾಗಿ ಸಂಕಷ್ಟಕ್ಕೀಡಾದ ಶಿಕ್ಷಣ ಕ್ಷೇತ್ರದ ದೈಹಿಕ ಶಿಕ್ಷಕರಿಗೆ ಸರಕಾರ ಗುಡ್ ನ್ಯೂಸ್ ನೀಡಿದೆ.
ಕೊರೊನಾ ವೈರಸ್ನಿಂದಾಗಿನ ಕಳೆದ ಒಂದೂವರೆ ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರಕ್ಕೂ ತೀವ್ರ ಹಿನ್ನಡೆಯಾಗಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸ ಕುಂಠಿತಗೊಂಡಿದ್ದು, ಮತ್ತೊಂದೆಡೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ವೇತನ ಪಾವತಿಯಾಗಿಲ್ಲ. ಈ ನಡುವೆ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕ ಬಹುಕಾಲದ ಬೇಡಿಕೆ ಹೊಂದಿದ್ದು, ಇದೀಗ ಸಕಾಲ ಕೂಡಿ ಬಂದಿದೆ.
ಸರ್ಕಾರಿ ಪ್ರೌಢ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರ ಬಹುಕಾಲದ ಬೇಡಿಕೆಯಾಗಿದ್ದ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಗೆ ಬಡ್ತಿಗೆ ಸಂಬಂಧಿಸಿದಂತೆ ಆದೇಶ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ. ಆ ಮೂಲಕ ದೀರ್ಘ ಕಾಲದಿಂದಲೂ ಇದ್ದಂತಹ ಬೇಡಿಕೆಯೊಂದು ಈಡೇರಿದಂತಾಗಿದೆ.
'ಸರ್ಕಾರಿ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಯಿಂದ ಗ್ರೂಪ್-ಬಿ ವೃಂದದ ದೈಹಿಕ ಶಿಕ್ಷಣ ಪರಿವೀಕ್ಷಕರ 148 ಹುದ್ದೆಗಳಿಗೆ ಮುಂಬಡ್ತಿಯನ್ನು ನೀಡಿ ಆದೇಶ ಹೊರಡಿಸಲಾಗಿದೆ' ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.