ಬೆಂಗಳೂರು, ಜೂ 18 (DaijiworldNews/PY): ಬಿಜೆಪಿ ಆಡಳಿತವೆಂದರೆ ನಿತ್ಯ ಜಗಳದ "ಕುಡುಕನ ಸಂಸಾರ" ಇದ್ದಂತೆ. ಸಂಸಾರ ನಿಭಾಯಿಸದೆ ನಿತ್ಯ ಕುಡಿದು ಜಗಳವಾಡುವ ಬೇಜವಾಬ್ದಾರಿ ಗಂಡನಂತಾಗಿದೆ ಬಿಜೆಪಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಆಡಳಿತವೆಂದರೆ ನಿತ್ಯ ಜಗಳದ "ಕುಡುಕನ ಸಂಸಾರ" ಇದ್ದಂತೆ. ಸಂಸಾರ ನಿಭಾಯಿಸದೆ ನಿತ್ಯ ಕುಡಿದು ಜಗಳವಾಡುವ ಬೇಜವಾಬ್ದಾರಿ ಗಂಡನಂತಾಗಿದೆ ಬಿಜೆಪಿ. ಬೆಲೆ ಏರಿಕೆ, ಕರೋನಾ 3ನೇ, ರೈತರ ಸಂಕಷ್ಟ, ನಿರುದ್ಯೋಗ, ಆರ್ಥಿಕ ಕುಸಿತ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಮರೆತು ಕುರ್ಚಿ ಕಿತ್ತಾಟವೇ ಇವರ ನಿತ್ಯದ ಕಾಯಕವಾಗಿದೆ ಎಂದಿದೆ.
"ಪೆಟ್ರೋಲ್ ಬೆಲೆ ಐತಿಹಾಸಿಕ ಏರಿಕೆ ಕಂಡಿದೆ, ಈ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಅಭಿನಂದನೆಗಳನ್ನು ತಿಳಿಸಲು ಇಚ್ಛಿಸುತ್ತೇವೆ! ಕಳೆದ 70 ವರ್ಷಗಳಲ್ಲಿ ಮಾಡಲಾಗದ ಪೆಟ್ರೋಲ್ 100 ನಾಟೌಟ್ ಸಾಧನೆಯನ್ನು ಮಾಡಿದ್ದಕ್ಕೆ ಹಾಗೂ ಜನ ಹಿತ ಮರೆತು ಆಂತರಿಕ ಕಿತ್ತಾಟವನ್ನು ಅಮೋಘ 3ನೇ ದಿನದಾಟ ಮುಂದುವರೆಸಿದ್ದಕ್ಕೆ!" ಎಂದು ತಿಳಿಸಿದೆ.
"ಅರವಿಂದ್ ಬೆಲ್ಲದ್ vs ರೇಣುಕಾಚಾರ್ಯ, ಹೆಚ್. ವಿಶ್ವನಾಥ್ vs ಎಸ್.ಆರ್ ವಿಶ್ವನಾಥ್, ಯೋಗೇಶ್ವರ್ vs ಬೊಮ್ಮಾಯಿ, ಯತ್ನಾಳ್ vs ವಿಜಯೇಂದ್ರ, ಯಡಿಯೂರಪ್ಪ vs ಈಶ್ವರಪ್ಪ, ವಲಸಿಗರು vs ಮೂಲದವರು. ಮನೆಯೊಂದು ನೂರಾರು ಬಾಗಿಲಾಗಿರುವ ಬಿಜೆಪಿ ಪಕ್ಷದ ಬಿಜೆಪಿvsಬಿಜೆಪಿ ಕುರ್ಚಿ ಕದನದಲ್ಲಿ ರಾಜ್ಯ ಅನಾಥವಾಗಿದೆ. ಈ ಅಯೋಗ್ಯತನಕ್ಕೆ ಬಿಜೆಪಿಗೇಕೆ ಅಧಿಕಾರ?" ಎಂದು ಪ್ರಶ್ನಿಸಿದೆ.
"ರಾಜ್ಯದಲ್ಲಿ ಮುಂಗಾರು ಆರಂಭಗೊಂಡಿದೆ, ರೈತರಿಗೆ ಬಿತ್ತನೆ ಬೀಜಗಳು ಸಿಗುತ್ತಿಲ್ಲ. ಗೊಬ್ಬರ ದೊರಕುತ್ತಿಲ್ಲ, ಇಂಧನ ತೈಲಗಳ ಬೆಲೆ ಏರಿಕೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ. ರಾಜ್ಯದ ಹಲವು ಬಾಗಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದೆಲ್ಲದರ ಚಿಂತೆ ಇಲ್ಲದ ಬಿಜೆಪಿ ಸರ್ಕಾರ ಕಿತ್ತಾಟದಲ್ಲಿ ಮುಳುಗಿದ್ದು ರಾಜ್ಯದ ದುರ್ದೈವ" ಎಂದಿದೆ.