ಅಸ್ಸಾಂ, ಜೂ 18 (DaijiworldNews/PY): ಅಸ್ಸಾಂನ ಮಾರಿಯನಿ ವಿಧಾನಸಭಾ ಕ್ಷೇತ್ರದ ಶಾಸಕ ರುಪ್ ಜ್ಯೋತಿ ಕುರ್ಮಿ ಅವರು ಕಾಂಗ್ರೆಸ್ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದು, ಶೀಘ್ರವೇ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ರುಪ್ ಜ್ಯೋತಿ ಕುರ್ಮಿ ಅವರು ಚಹಾ ತೋಟ ಕಾಯುವ ಸಮುದಾಯದ ಮುಖಂಡರಾಗಿದ್ದು, ವಿಧಾನಸಭಾ ಸ್ಪೀಕರ್ ಬಿಸ್ವಜಿತ್ ಡೈಮರಿ ಅವರಿಗೆ ಇಂದು ರಾಜೀನಾಮೆ ಪತ್ರ ನೀಡಿರುವುದಾಗಿ ವರದಿ ತಿಳಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ರುಪ್ ಜ್ಯೋತಿ ಕುರ್ಮಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೂ ರಾಜೀನಾಮೆ ಪತ್ರ ರವಾನಿಸಿರುವುದಾಗಿ ಹೇಳಿದ್ದಾರೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಕುರ್ಮಿ ಅವರ ರಾಜೀನಾಮೆಯನ್ನು ಅನುಮೋದಿಸಿರುವುದಾಗಿ ಅಸ್ಸಾಂನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಿಪುನ್ ಬೋರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುರ್ಮಿ ಅವರು ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಜೂನ್ 21ರಂದು ಕುರ್ಮಿ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಕುರ್ಮಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿರುವುದಾಗಿ ವರದಿ ವಿವರಿಸಿದೆ.