ಚೆನ್ನೈ, ಜೂ. 18 (DaijiworldNews/HR): ಮಹಿಳೆಯರ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡುತ್ತಿದ್ದ ಯೂಟ್ಯೂಬರ್, ಪಬ್ ಜಿ ಗೇಮರ್ ಮದನ್ ಮತ್ತು ಆತನ ಪತ್ನಿ ಕೃತಿಕಾನನ್ನು ಚೆನ್ನೈನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ತನ್ನನ್ನು ಬಂಧಿಸಬಹುದೆಂದು ಖಚಿತವಾಗುತ್ತಿದ್ದಂತೆಯೇ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಲು ಮದನ್ ಗುರುವಾರ ರಾತ್ರಿಯೆ ನಿರ್ಧರಿಸಿದ್ದ ಎನ್ನಲಾಗಿದ್ದು, ಜಾಮೀನು ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಪೊಲೀಸರು ಆತನನ್ನು ಬಂಧಿಸಿದ್ದು, ಇದೀಗ ನ್ಯಾಯಾಧೀಶ ಎಂ.ದಂಡಪಣಿಯವರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇನ್ನು ಮದನ್ ಮಹಿಳೆಯರ ವಿರುದ್ಧ ಅಶ್ಲೀಲ ಭಾಷೆ ಬಳಕೆ ಮಾಡಿರುವುದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ 1986ರ ಇನ್ಡೀಸೆಂಟ್ ಪ್ರಾತಿನಿದ್ಯ ಕಾಯ್ದೆ ಅಡಿಯಲ್ಲಿ ಆತನ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿವೆ.
ಮದನ್ನನ್ನು ಬಂಧಿಸುವ ಎರಡು ದಿನಗಳ ಹಿಂದಷ್ಟೇ ಅವರ ಪತ್ನಿ ಕೃತಿಕಾ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಯೂಟ್ಯೂಬ್ ವಿಡಿಯೋ ವೇಳೆ ಮದನ್ ಜೊತೆಗೆ ಅಶ್ಲೀಲ ಭಾಷೆ ಬಳಕೆ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದರು.
ಇನ್ನು ಕೃತಿಕಾ ಕೂಡ ಯೂಟ್ಯೂಬ್ ಚಾನೆಲ್ನ ಅಡ್ಮಿನ್ ಆಗಿದ್ದು, ಇಬ್ಬರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಸೇಲಂ ಮೂಲದವರಾಗಿದ್ದಾರೆ.