ಕೋಲ್ಕತ್ತ, ಜೂ 18 (DaijiworldNews/PY): ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ದ ಉಂಟಾದ ಸೋಲನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಸುವೇಂದು ವಿರುದ್ದ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೋಲ್ಕತ್ತ ಹೈಕೋರ್ಟ್ ಜೂನ್ 24ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿ ಕೌಸಿಕ್ ಚಂದಾ ಅವರ ನೇತೃತ್ವದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿದ್ದು, "ಜೂನ್ 24ರ ಗುರುವಾರದಂದು ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು" ಎಂದು ತಿಳಿಸಿದೆ.
ಅರ್ಜಿಯಲ್ಲಿ ಆರೋಪಿಸಿರುವ ಮಮತಾ ಬ್ಯಾನರ್ಜಿ ಅವರು, "ನಂದಿಗ್ರಾಮ ವಿಧಾನಸಭೆ ಕ್ಷೇತ್ರದ ಚುನಾವಣೆಯ ಸಂದರ್ಭ ಇವಿಎಂಗಳನ್ನು ದುರ್ಬಳಕೆ ಮಾಡಲಾಗಿದೆ. ಹಾಗಾಗಿ ಮರು ಎಣಿಕೆ ಮಾಡಬೇಕು ಎಂದು ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೆ. ಆದರೆ, ಆ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ" ಎಂದಿದ್ದಾರೆ.
ಸುವೇಂಧು ಅಧಿಕಾರಿ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ದ 200ಕ್ಕೂ ಕಡಿಮೆ ಅಂತರದಲ್ಲಿ ಜಯ ಗಳಿಸಿದ್ದರು. ಇದನ್ನು ಪ್ರಶ್ನಿಸಿರುವ ಮಮತಾ ಬ್ಯಾನರ್ಜಿ ಅವರು, ಸುವೇಂದು ವಿರುದ್ದ ಹಣ ಹಂಚಿಕೆ, ಭ್ರಷ್ಟಾಚಾರ ಸೇರಿದಂತೆ ದ್ವೇಷ ಹಾಗೂ ಧರ್ಮದ ಆಧಾರದ ಮೇಲೆ ಆರೋಪಗಳನ್ನು ಮಾಡಿ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.