ಬೆಂಗಳೂರು, ಜೂ. 18 (DaijiworldNews/HR): ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ನ್ಯಾಯಾಲಯದ ಆದೇಶ ವಜಾಗೊಳಿಸಿ 115 ಮಂದಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ.
ಗಲಭೆ ಪ್ರಕರಣಕ್ಕೆ ಸಂಬಢಿಸಿದಂತೆ ಆರೋಪಿಗಳನ್ನು 2020ರ ಆಗಸ್ಟ್ 12ರಂದು ಬಂಧಿಸಲಾಗಿತ್ತು. ತನಿಖೆ ಪೂರ್ಣಗೊಳಿಸಬೇಕಾದ 90 ದಿನಗಳ ಅವಧಿ 2020ರ ನ.9ಕ್ಕೆ ಮುಗಿದಿತ್ತು. ಆ ಬಳಿಕ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಎನ್ಐಎ, ತನಿಖಾ ಅವಧಿ ವಿಸ್ತರಿಸುವಂತೆ ಕೋರಿತ್ತು. ಅದೇ ದಿನ ತನಿಖಾ ಅವಧಿಯನ್ನು 90 ದಿನಗಳ ಕಾಲ ವಿಸ್ತರಿಸಿ ವಿಶೇಷ ನ್ಯಾಯಾಲಯವು ಆದೇಶಿಸಿದ್ದು, ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಸಲ್ಲಿಸಿದ್ದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು.
ಇನ್ನು ಈ ಪ್ರಕರಣದ ತನಿಖೆ ಪೂರ್ಣಗೊಳಿಸಲು ಎನ್ಐಎಗೆ 90 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ 115 ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಪ್ರಕರಣದಲ್ಲಿ ಆರೋಪಿಗಳ ಗಮನಕ್ಕೆ ತರದೆ, ತನಿಖಾ ಅವಧಿ ವಿಸ್ತರಿಸಿ ವಿಶೇಷ ನ್ಯಾಯಾಲಯ (ಎನ್ಐಎ) ಹೊರಡಿಸಿರುವ ಆದೇಶವು ಕಾನೂನು ಬಾಹಿರವಾಗಿರುವುದರಿಂದ ಅರ್ಜಿದಾರರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಆದೇಶಿಸಿದೆ.
ಇನ್ನು ಅರ್ಜಿದಾರ ಆರೋಪಿಗಳು ಎರಡು ತಲಾ ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. ವಿಚಾರಣಾ ನ್ಯಾಯಾಲಯ ಮತ್ತು ತನಿಖಾಧಿಕಾರಿ ಕರೆದಾಗ ತಪ್ಪದೇ ಹಾಜರಾಗಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿ ಹೈಕೋರ್ಟ್ ಆದೇಶಿಸಿದೆ.