ಉನ್ನಾವೊ, ಜೂ 18 (DaijiworldNews/MS): ಉತ್ತರ ಪ್ರದೇಶದಲ್ಲಿ ಗಲಭೆಯನ್ನು ನಿಯಂತ್ರಿಸುವ ಸಂದರ್ಭ ಪೊಲೀಸ್ ಸಿಬ್ಬಂದಿಗಳಿಬ್ಬರು ಪ್ಲಾಸ್ಟಿಕ್ ಸ್ಟೂಲ್ ಅನ್ನು ಹೆಲ್ಮೆಟ್ ನಂತೆ ಹಾಗೂ ಬಳ್ಳಿಯ ಬುಟ್ಟಿಯನ್ನು ಗುರಾಣಿಯಾಗಿ ಬಳಸಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರಗಳು ವೈರಲ್ ಆದ ಬಳಿಕ ಈ ಇಬ್ಬರು ಪೊಲೀಸರನ್ನು, ಇಲಾಖೆ ಅಮಾನತುಗೊಳಿಸಿದೆ.
ಉತ್ತರ ಪ್ರದೇಶದ ಉನ್ನಾವೊ ಹಳ್ಳಿಯೊಂದರ ಬಳಿ ಅಪಘಾತವೊಂದರಲ್ಲಿ ಇಬ್ಬರು ಬೈಕು ಸವಾರರು ಮೃತಪಟ್ಟಿದ್ದು ಇದರ ವಿರುದ್ದ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದರು. ಈ ವೇಳೆ ಪ್ರತಿಭಟನೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವಾಗ ಗಲಭೆ ವೇಳೆ ಇಲಾಖೆ ಬಳಸುವ ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆಯನ್ನು ಬಳಸದೆ ತಲೆಗೆ ಹೆಲ್ಮಟ್’ನಂತೆ ಪ್ಲಾಸ್ಟಿಕ್ ಸ್ಟೂಲ್ ಗುರಾಣಿಯಾಗಿ ಬಳ್ಳಿಯ ಬುಟ್ಟಿಯನ್ನುಬಳಸಿದ್ದರು. ಈ ಚಿತ್ರ ವೈರಲ್ ಆಗಿತ್ತು. ಇದೆ ವೇಳೆ ಪ್ರತಿಭಟನೆ ವೇಳೆ ನಡೆದ ಕಲ್ಲು ತೂರಾಟದಲ್ಲಿ 12 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
" ಈಗಾಗಲೇ ಈ ಜಿಲ್ಲೆಗೆ ಸಾಕಷ್ಟು ರಕ್ಷಣಾ ಸಾಮಗ್ರಿ ಮತ್ತು ಸುರಕ್ಷತಾ ಸಲಕರಣೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಪೊಲೀಸ್ ಇಲಾಖೆ , ಪ್ಲಾಸ್ಟಿಕ್ ಸ್ಟೂಲ್ ಹಾಗೂ ಬಳ್ಳಿಯ ಬುಟ್ಟಿ ಬಳಸಿದ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.