ನವದೆಹಲಿ, ಜೂ 18 (DaijiworldNews/PY): ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಭಾರತ ಸರ್ಕಾರ ನೂತನ ನಿಯಮ ಜಾರಿಗೆ ತಂದಿದೆ. ಈ ನಿಯಮಗಳನ್ನು ಪಾಲಿಸದ ಹಿನ್ನೆಲೆ ಟ್ವಿಟ್ಟರ್ ತನ್ನ ಷೇರುಗಳ ಮೇಲೆ ಹೊಡೆತ ಬಿದ್ದಿದ್ದು, ಟ್ವಿಟ್ಟರ್ ಷೇರುಗಳು ತೀವ್ರವಾಗಿ ಇಳಿಕೆ ಕಂಡಿದೆ.
"ಟ್ವಿಟ್ಟರ್ ವಿವಾದಗಳಿಂದ ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿನ ಷೇರು 52 ವಾರಗಳ ಗರಿಷ್ಠ ಮಟ್ಟದಿಂದ ಶೇ.25ಕ್ಕೆ ಇಳಿಕೆ ಕಂಡಿದ್ದು, ಅಪಾರ ನಷ್ಟ ಅನುಭವಿಸಿದೆ. ಎಲ್ಲಾ ಸಾಮಾಜಿಕ ಜಾಲತಾಣಗಳು ಜೂನ್ 16ರಂದು ನೂತನ ಐಟಿ ನಿಯಮಗಳನ್ನು ಜಾರಿಗೆ ತಂದಿವೆ. ಆದರೆ, ಟ್ವಿಟ್ಟರ್ ಮಾತ್ರ ಹೊಸ ನಿಯಮಗಳ ಪಾಲನೆ ಮಾಡಿಲ್ಲ. ಟ್ವಿಟ್ಟರ್ಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು" ಎಂದು ಭಾರತ ಸರ್ಕಾರ ತಿಳಿಸಿದೆ.
ನ್ಯೂಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಟ್ವಿಟ್ಟರ್ನ ಷೇರುಗಳು ಬುಧವಾರ ಅರ್ಧದಷ್ಟು ಕುಸಿದಿದ್ದು 59.93 ಡಾಲರ್ಗೆ ತಲುಪಿತ್ತು.
ಕಂಪೆನಿಯ ಷೇರುಗಳಲ್ಲಿ ಗುರುವಾರ ಕೊಂಚ ಮಟ್ಟಿಗೆ ಏರಿಕೆ ಕಂಡಿದ್ದು, ಭಾರತದಲ್ಲಿ ಟ್ವಿಟ್ಟರ್ ನಿಷೇಧಿಸುವುದಿಲ್ಲ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ ಬಳಿಕ ಈ ಬೆಳವಣಿಗೆ ಕಾಣಿಸಿಕೊಂಡಿದೆ.
ರಾಷ್ಟ್ರಾದಾದ್ಯಂತ ಸಂಚನಲ ಮೂಡಿಸಿದ್ದ ಮುಸ್ಲಿಂ ವೃದ್ದರೋರ್ವರಿಗೆ ಹಲ್ಲೆ ಮಾಡಿ ಜೈಶ್ರೀ ರಾಮ್ ಹೇಳುವಂತೆ ಒತ್ತಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಇಂಡಿಯಾ ಎಂಡಿಗೆ ಘಾಜಿಯಾಬಾದ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ವಿಡಿಯೋದಲ್ಲಿ ನಾಲ್ವರು ಯುವಕರು ವೃದ್ದನ ಗಡ್ಡ ಕತ್ತರಿಸಿ, ಜೈ ಶ್ರೀ ರಾಮ್ ಘೋಷಣೆ ಕೂಗಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಆರೋಪಿಸಿಲಾಗಿತ್ತು. ಇದು ಕೋಮುಸಂಘರ್ಷಕ್ಕೆ ದಾರಿ ಮಾಡಿಕೊಡುವ ಪೋಸ್ಟ್ ಎಂದು ಪೊಲೀಸರು ಟ್ವಿಟ್ಟರ್ ವಿರುದ್ದ ಪ್ರಕರಣ ದಾಖಲಿಸಿತ್ತು.
ಟ್ಟಿಟ್ಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಘಾಜಿಯಾಬಾದ್ ಪೊಲೀಸರು ಕಳುಹಿಸಿರುವ ನೋಟಿಸ್ ಅನ್ನು ಸುದ್ದಿ ಸಂಸ್ಥೆಯೊಂದು ಹಂಚಿಕೊಂಡಿದೆ.
"ಟ್ವಿಟ್ಟರ್ನಲ್ಲಿ ವೈರಲ್ ಆದ ವಿಡಿಯೋದಲ್ಲಿ ಹಲ್ಲೆಗೊಳಗಾದ ವೃದ್ದ ಸೈಫಿ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ್ದರು. ಆದರೆ, ಎಫ್ಐಆರ್ನಲ್ಲಿ ಅಂತಹ ಯಾವುದೇ ರೀತಿಯ ಆರೋಪ ಮಾಡಿಲ್ಲ" ಎಂದು ಪೊಲೀಸರು ಹೇಳಿದ್ದಾರೆ.
ಟ್ವಿಟ್ಟರ್ ಕಮ್ಯುನಿಕೇಷನ್ ಇಂಡಿಯಾ, ಟ್ವಿಟ್ಟರ್ ಐಎನ್ಸಿ, ದಿ ವೈರ್ ನ್ಯೂಸ್ ಪೋರ್ಟಲ್ ಸೇರಿದಂತೆ ಪತ್ರಕರ್ತರಾದ ಮೊಹಮ್ಮದ್ ಜುಬೈರ್, ರಾಣಾ ಅಯೂಬ್, ಸಬಾ ನಖ್ವಿ ಹಾಗೂ ಕಾಂಗ್ರೆಸ್ ಮುಖಂಡರಾದ ಸಲ್ಮಾನ್ ನಿಜಾಮಿ, ಮಸ್ಕೂರ್ ಉಸ್ಮಾನಿ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸಾಮ ಮೊಹಮ್ಮದ್ ವಿರುದ್ದ ಉತ್ತರ ಪ್ರದೇಶ ಸರ್ಕಾರ ದೂರು ದಾಖಲಿಸಿದೆ.