ಬೆಂಗಳೂರು, ಜೂ. 18 (DaijiworldNews/HR): ಬಿಜೆಪಿ ಪಕ್ಷದ ಶಾಸಕರಿಂದಲೇ ಫೋನ್ ಕದ್ದಾಲಿಕೆ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "ಸ್ವತಃ ಆಡಳಿತ ಪಕ್ಷದ ಶಾಸಕರಿಂದಲೇ ಫೋನ್ ಕದ್ದಾಲಿಕೆ ಬಗ್ಗೆ ಆರೋಪ ಕೇಳಿ ಬಂದಿದೆ, ಸಿಎಂ ರಾಜೀನಾಮೆ ಕೊಟ್ಟಂತಹ ಇತಿಹಾಸ ಹೊಂದಿರುವ ಗಂಭೀರ ಆರೋಪ ಇದು. ರಮೇಶ್ ಜಾರಕಿಹೊಳಿ ಪ್ರಕರಣದಲ್ಲೂ ವಕೀಲರ ಫೋನ್ ಕದ್ದಾಲಿಕೆಯಾಗಿದೆ. ಈ ಬಗ್ಗೆ ಸಮಗ್ರವಾಗಿ ಉನ್ನತ ತನಿಖೆಯಾಗಬೇಕು" ಎಂದು ಒತ್ತಾಯಿಸಿದೆ.
"ನನ್ನ ಫೋನ್ ಕರೆ ಕದ್ದಾಲಿಕೆಯಾಗುತ್ತಿದ್ದು, ಕಾಣದ ಕೈಗಳು ನನ್ನ ವಿರುದ್ಧ ಪಿತೂರಿ ನಡೆಸುತ್ತಿವೆ" ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಗುರುವಾರ ಆರೋಪಿಸಿದ್ದರು.
ಇನ್ನು ಫೋನ್ ಕದ್ದಾಲಿಕೆ ಸಂಬಂಧ ತನಿಖೆ ನಡೆಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಬೆಲ್ಲದ್ ತಿಳಿಸಿದ್ದರು.