ಬೆಂಗಳೂರು, ಜೂ 18 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಜೈಲಿಗೆ ಹೋಗುತ್ತಾರೆ ಎನ್ನುವ ಆತಂಕ ನಮ್ಮದು. ವಿಧಾನಸೌಧ ಶಕ್ತಿಪೀಠ ಮಸುಕಾಗುತ್ತಿದೆ. ನಾಯಕತ್ವ ಕೂಡಾ ಕುಸಿಯುತ್ತಿದೆ" ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಸ್ತುತ ಸಂದರ್ಭ ಸಮರ್ಪಕವಾದ ನಾಯಕತ್ವದ ಅಗತ್ಯವಿದೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಎನ್ನುವ ಪಕ್ಷದ ಸಿದ್ದಾಂತವನ್ನು ಪಾಲಿಸುವ ವಿಚಾರದ ಬಗ್ಗೆ ನಾನು ಪ್ರಸ್ತಾಪಿಸಿದ್ದೇನೆ. ಸಿಎಂ ಯಡಿಯೂರಪ್ಪ ಅವರಿಗೆ ಮೊದಲಿಗಿದ್ದ ಶಕ್ತಿ ಈಗ ಇಲ್ಲವಾಗಿದೆ" ಎಂದಿದ್ದಾರೆ.
"ಸರ್ಕಾರ ಜನರದ್ದು, ಯಾವುದೇ ಕುಟುಂಬಕ್ಕೆ ಸೇರಿಲ್ಲ. ಸರ್ಕಾರದಲ್ಲಿ ಯಡಿಯೂರಪ್ಪ ಅವರ ಕುಟುಂಬದವರ ಹಸ್ತಕ್ಷೇಪ ಇಲ್ಲ ಎನ್ನುವುದನ್ನು ನಾನು ಹೇಳುತ್ತಿಲ್ಲ. ಈ ಬಗ್ಗೆ ಸಚಿವರೇ ಹೇಳುತ್ತಿದ್ದಾರೆ. ರಾಜ್ಯದ ಜನತೆ ತಿಳಿದಿದೆ" ಎಂದು ಹೇಳಿದ್ದಾರೆ.
"ಯಡಿಯೂರಪ್ಪ ಅವರಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಸಿಎಂ ಅವರ ಪುತ್ರ ಬಿ.ವೈ.ವಿಜಯೇಂದ್ರ ಎಲ್ಲಾ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಈ ರೀತಿಯ ನಾಯಕತ್ವದಿಂದ ಯಾವುದೇ ಪ್ರಯೋಜನವಿಲ್ಲ. ಯಡಿಯೂರಪ್ಪ ಅವರನ್ನು ಗೌರವಿಸಿ ಮುಖ್ಯಮಂತ್ರಿ ಮಾಡಿದ್ದೇವೆ. ನಮ್ಮ ಸಹಕಾರದ ಕಾರಣ ಇಂದು ಸರ್ಕಾರ ಅಸ್ತಿತ್ವಕ್ಕೆ ಬಂದಿದೆ" ಎಂದು ತಿಳಿಸಿದ್ದಾರೆ.
"ರಾಜ್ಯಪಾಲರ ಬಳಿ ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಏಕೆ ಹೋಗಿದ್ದು?. ನೀರಾವರಿ ಇಲಾಖೆಯಲ್ಲಿ ಆತುರದಲ್ಲಿ 20 ಸಾವಿರ ಟೆಂಡರ್ ಕರೆಯಲಾಗಿದ್ದು, ಇದರಿಂದ ಪಕ್ಷಕ್ಕೆ ಹಾನಿಯಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ರಾಜ್ಯ ಉಸ್ತುವಾರಿ ಸಚಿವ ಅರುಣ್ ಸಿಂಗ್ ಅವರ ಗಮನಕ್ಕೆ ತಂದಿದ್ದೇನೆ" ಎಂದಿದ್ದಾರೆ.