ಹಾಸನ, ಜೂ 18 (DaijiworldNews/PY): "ಕಾಂಗ್ರೆಸ್ಗೆ ಹೆಚ್.ಡಿ ದೇವೇಗೌಡ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದ ಶಾಪ ತಟ್ಟಿದ್ದು, ಕಾಂಗ್ರೆಸ್ಗೆ ಈ ಪರಿಸ್ಥಿತಿ ಎದುರಾಗಿದೆ" ಎಂದು ಶಾಸಕ ಹೆಚ್.ಡಿ.ರೇವಣ್ಣ ದೂರಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, "ಕಳೆದ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದಾಗಿಯೇ ಕಾಂಗ್ರೆಸ್ 70 ಸ್ಥಾನ ಪಡೆದುಕೊಂಡಿತ್ತು. ಸಿದ್ದರಾಮಯ್ಯ ರಾಮಯ್ಯ ಅವರು ಇರದೇ ಇರುತ್ತಿದ್ದರೇ ಕಾಂಗ್ರೆಸ್ ಶೂನ್ಯವಾಗುತ್ತಿತ್ತು" ಎಂದು ತಿಳಿಸಿದ್ದಾರೆ.
"ರಾಜ್ಯದಲ್ಲಿ ಕೈ ಪಕ್ಷ ಉಳಿಯಲು ಸಿದ್ದರಾಮಯ್ಯ ಅವರೇ ಕಾರಣ. ಅವರು ಇರದೇ ಇರುತ್ತಿದ್ದರೆ ಕಾಂಗ್ರೆಸ್ ನಿರ್ನಾಮವಾಗುತ್ತಿತ್ತು. ಸಿದ್ದರಾಮಯ್ಯ ಅವರು ಸದ್ಯ ಪಕ್ಷವನ್ನು ಶೇ.70ಕ್ಕೆ ತಂದು ನಿಲ್ಲಿಸಿದ್ದಾರೆ. ಪ್ರಸ್ತುತ ಸಿದ್ದರಾಮಯ್ಯ ಅವರು ಕೈ ಬಿಟ್ಟಲ್ಲಿ ಪಕ್ಷ ಮುಳುಗುವುದು ಖಂಡಿತ" ಎಂದಿದ್ದಾರೆ.
ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಜನರ ಪ್ರಾಣ ರಕ್ಷಣೆಯತ್ತ ಗಮನ ಹರಿಸದೇ ಪ್ರಚಾರದ ಸಲುವಾಗಿ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಪ್ರತಿಭಟನೆ ಕೈಗೊಂಡ ಕೂಡಲೇ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿಯುತ್ತಾರಾ?" ಎಂದು ಕೇಳಿದ್ದಾರೆ.