ಹೈದರಾಬಾದ್, ಜೂ 18 (DaijiworldNews/MS): ಕೋವಿಡ್ -19 ನಿಯಮಗಳನ್ನು ಉಲ್ಲಂಘನೆ ಮಾಡಿ ಬಹ್ರೈನ್ನಲ್ಲಿ 3 ವರ್ಷ ಜೈಲು ಶಿಕ್ಷೆಗೊಳಗಾಗಿರುವ ತನ್ನ ಸಹೋದರನನ್ನು ಜೈಲಿನಿಂದ ಬಿಡುಗಡೆ ಮಾಡಲು ಹೈದರಾಬಾದ್ನ ವ್ಯಕ್ತಿಯೊಬ್ಬರು ವಿದೇಶಾಂಗ ಸಚಿವಾಲಯದ (ಎಂಇಎ) ಸಹಾಯವನ್ನು ಕೋರಿದ್ದಾರೆ.
ಮೊಹಮ್ಮದ್ ಖಾಲಿದ್
ಕೊವೀಡ್ ನಿಯಮಗಳನ್ನು ಪಾಲಿಸದ ಹಿನ್ನಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಬಹ್ರೇನ್ನಲ್ಲಿ ಕೆಲಸ ಮಾಡುತ್ತಿರುವ ಬಿಹಾರ ಮೂಲದ ಮೊಹಮ್ಮದ್ ಖಾಲಿದ್ (34) ಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಜೂನ್ 7 ರಂದು 5,000 ಬಹ್ರೇನಿ ದಿನಾರ್ (9.72 ಲಕ್ಷ ರೂ) ದಂಡ ವಿಧಿಸಲಾಗಿದೆ.
ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಮೊಹಮ್ಮದ್ ಖಾಲಿದ್ಗೆ ಮೇ 18 ರಂದು ಕರೊನಾ ಪಾಸಿಟೀವ್ ಬಂತು. ಕೋವಿಡ್ ಕ್ಯಾಂಪ್ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮೇ 31 ಕ್ಕೆ ಡಿಸ್ಚಾರ್ಜ್ ಆಗಿದ್ದು, ನಂತರ 17 ದಿನಗಳ ಮಟ್ಟಿಗೆ ಮನೆಯಲ್ಲೇ ಕ್ವಾರಂಟೈನ್ ಆಗಲು ಹೇಳಲಾಗಿತ್ತು. ಕಂಪೆನಿ ಒದಗಿಸಿದ್ದ ಜಾಗದಲ್ಲಿ ವಾಸಿಸುತ್ತಿದ್ದು, ಆದರೆ ಅಲ್ಲಿ ಆಹಾರವನ್ನು ನೀಡಲು ಯಾರೂ ಇರಲಿಲ್ಲ. ಊಟದ ವ್ಯವಸ್ಥೆ ಇಲ್ಲದ್ದರಿಂದ ಜೂನ್ 7 ರಂದು ಆಹಾರ ಖರೀದಿಸಲು ಹೊರಗೆ ಹೋಗಿದ್ದ. ಆ ಸಮಯದಲ್ಲಿ ಸ್ಥಳೀಯರೊಬ್ಬರು ಆತ ಎಲೆಕ್ಟ್ರಾನಿಕ್ ಟ್ರ್ಯಾಕರ್ ವ್ರಿಸ್ಟ್ಬ್ಯಾಂಡ್ ಹಾಕಿಕೊಂಡು ಓಡಾಡುತ್ತಿದ್ದಾನೆಂದು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದರು. ನನ್ನ ಸಹೋದರನನ್ನು ತಕ್ಷಣವೇ ಬಂಧಿಸಿ ರಾಜಧಾನಿ ಮನಾಮಾದಿಂದ 5 ಕಿ.ಮೀ ದಕ್ಷಿಣದಲ್ಲಿರುವ ಸಿತ್ರಾ ದ್ವೀಪದಲ್ಲಿರುವ ಕೋವಿಡ್ -19 ಶಿಬಿರಕ್ಕೆ ಕರೆದೊಯ್ಯಲಾಯಿತು, ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಆದಾಗ್ಯೂ, ಖಾಲಿದ್ ಅವರ ಸಹೋದರ ಹುಸೇನ್ ಅಹ್ಮದ್, ಖಲೀದ್ 17 ದಿನಗಳ ಮನೆ ಕ್ವಾರಂಟೈನ್ ಪೂರ್ಣಗೊಳಿಸಿದ್ದು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ಹೇಳಿದರು. ಪತ್ರದಲ್ಲಿ ಕೇಂದ್ರ ಸಚಿವ ಎಸ್.ಜೈಶಂಕರ್ ಮಧ್ಯಪ್ರವೇಶಿಸಿ ತನ್ನ ಸಹೋದರನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬಂಧನದ ನಂತರ ಆತನ ಕೋವಿಡ್ ಪರೀಕ್ಷೆ ಮಾಡಿದಾಗ ನೆಗೆಟೀವ್ ಬಂತು. ಆದಾಗ್ಯೂ ಅವನಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಯಿತು. ಕುಟುಂಬವು ಬಡತನದ ಕಾರಣದಿಂದಾಗಿ ಕಾನೂನು ಸಹಾಯ ಪಡೆಯಲು ಅಸಮರ್ಥವಾಗಿದ್ದು, ಭಾರತ ಸರ್ಕಾರ ಅವನ ಬಿಡುಗಡೆಗೆ ಸಹಾಯ ಮಾಡಬೇಕೆಂದು ಹುಸ್ಸೈನ್ ಅಹಮದ್ ಮನವಿ ಮಾಡಿದ್ದಾರೆ.