ನವದೆಹಲಿ, ಜೂ. 17 (DaijiworldNews/SM): ದೇಶ ಪ್ರಗತಿಯಾಗಬೇಕಾದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಹಾಗೂ ತಜ್ಞರು ನೀಡುವ ಸಲಹೆಗಳನ್ನು ಪರಿಗಣಿಸಿ ಮುನ್ನಡೆಯಬೇಕೆಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ತಜ್ಞರು ಉತ್ತಮವಾದ ಸಲಹೆಗಳನ್ನು ನೀಡುತ್ತಾರೆ. ಆದರೆ, ಪ್ರಧಾನಿ ಮೋದಿ ಅವುಗಳನ್ನು ಪರಿಗಣಿಸುವುದಿಲ್ಲ. ನಿರಾಕರಣೆಯಲ್ಲಿಯೇ ಬದುಕುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಕೊರೋನಾ ನಿರ್ವಹಣೆಯಲ್ಲಿ ಮೋದಿ ಸರಕಾರ ಎಡವಿದೆ ಎನ್ನುವ ಆರೋಪ ಹೆಚ್ಚುತ್ತಿದೆ. ಈ ನಡುವೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಶ್ವದ ಬಡತನಕ್ಕೆ ಭಾರತದ ಕೊಡುಗೆಯೇ ಅಪಾರವೆಂದು ಈ ಹಿಂದೆ ಮಾಧ್ಯಮವೊಂದು ವರದಿ ಮಾಡಿತ್ತು. ಈ ವಿಚಾರಕ್ಕೂ ರಾಹುಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.