ನವದೆಹಲಿ, ಜೂ.17 (DaijiworldNews/HR): ಕೊರೊನಾ ಲಸಿಕೆ ಉತ್ಪಾದನೆಯಲ್ಲಿ ನವಜಾತ ಕರುಗಳ ಸೀರಮ್ (ಎನ್ಬಿಸಿಎಸ್) ಬಳಕೆಯನ್ನು ಪ್ರಾಣಿ ಮುಕ್ತ ವಿಧಾನಕ್ಕೆ ಬದಲಾಯಿಸುವಂತೆ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಅನಿಮಲ್ ರೈಟ್ಸ್ ಆರ್ಗನೈಸೇಶನ್ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಂಸ್ಥೆಯು ಪತ್ರ ಬರೆದು ಒತ್ತಾಯಿಸಿದೆ.
ಸಾಂಧರ್ಭಿಕ ಚಿತ್ರ
ನವಜಾತ ಕರುಗಳ ಸೀರಮ್ ನನ್ನು ಕೋವ್ಯಾಕ್ಸಿನ್ ಲಸಿಕೆಯಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿರವ ಹಿನ್ನೆಲೆಯಲ್ಲಿ ಪೆಟಾ ಸಂಸ್ಥೆ ಡಿಸಿಜಿಐಗೆ ಪತ್ರದ ಮೂಲಕ ಲಸಿಕೆ ತಯಾರಿಕೆಯನ್ನು ಪ್ರಾಣಿ ಮುಕ್ತ ವಿಧಾನಕ್ಕೆ ಪರಿವರ್ತಿಸುವಂತೆ ಕೇಳಿಕೊಂಡಿದೆ ಎನ್ನಲಾಗಿದೆ.
ಈ ಕುರಿತು ಪೆಟಾ ಸಂಸ್ಥೆ ಡಿಸಿಜಿಐ ಡಾ.ವಿ.ಜಿ.ಸೋಮಾನಿ ಅವರಿಗೆ ಪತ್ರ ಬರೆದಿದ್ದು, "ನವಜಾತ ಕರುಗಳ ಸೀರಮ್ ಗೆ ಬದಲಾಗಿ ಕೊರೊನಾ ಲಸಿಕೆ ಉತ್ಪಾದನೆಯಲ್ಲಿ ಪ್ರಾಣಿ ಮುಕ್ತವಾದ ವಾಣಿಜ್ಯಿಕವಾಗಿ ಲಭ್ಯವಿರುವ ಮತ್ತು ರಾಸಾಯನಿಕವಾಗಿ ಪ್ರಯೋಗಾತ್ಮಕವಾಗಿ ದೃಢಪಟ್ಟ ಮೂಲಗಳನ್ನು ಬಳಸಿಕೊಳ್ಳುವುದಕ್ಕೆ ಲಸಿಕೆ ಉತ್ಪಾದಕರಿಗೆ ನಿರ್ದೇಶನ ನೀಡಬೇಕು" ಎಂದು ಪೆಟಾ ಮನವಿ ಮಾಡಿಕೊಂಡಿದೆ.
ಇನ್ನು, ನವಜಾತ ಕರುವೊಂದರ ರಕ್ತದಿಂದ ಕೊವ್ಯಾಕ್ಸಿನ್ ಲಸಿಕೆಯನ್ನು ತಯಾರಿಸಲಾಗುತ್ತದೆ ಎಂಬ ಆರೋಪಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಕಾಂಗ್ರೆಸ್ನ ಗೌತಮ್ ಪಾಂಧಿ, ಟ್ವಿಟರ್ ನಲ್ಲಿ ದಾಖಲೆಗಳ ಸಹಿತ ಮಾಡಿದ್ದ ಆರೋಪಕ್ಕೆ ಪ್ರತಿಯಾಗಿ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಜಾಲತಾಣದಲ್ಲಿ ಪ್ರಕಟನೆ ನೀಡಲಾಗಿದೆ.