ಬೆಂಗಳೂರು, ಜೂ.17 (DaijiworldNews/HR): "ಕರ್ನಾಟದಲ್ಲಿ ಬಿಜೆಪಿ ನಾಯಕರ ಒಳಜಗಳದಿಂದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ, ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳೆದೆರಡು ದಿನಗಳಿಂದ ವಿಧಾನಸೌಧವೇ ಕೆ.ಕೆ. ಗೆಸ್ಟ್ಹೌಸ್ ಮತ್ತು ಬಿಜೆಪಿ ಕಚೇರಿಗೆ ಸ್ಥಳಾಂತರಗೊಂಡಂತೆ ಕಾಣುತ್ತಿದ್ದು, ಕಚೇರಿಯಲ್ಲಿ ಸಚಿವರಿಲ್ಲ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ. ಕೊರೊನಾ ಇನ್ನೂ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ, ಜನರ ಗೋಳನ್ನು ಕೇಳುವವರೇ ಇಲ್ಲ ಹಾಗಾಗಿ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು" ಎಂದಿದ್ದಾರೆ.
"ರಾಜ್ಯದಲ್ಲಿ ಮತ್ತೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕು/ಸಾವು, ಹಳ್ಳಿಗಳಿಗೂ ಹರಡುತ್ತಿರುವ ಸೋಂಕು, ಕೊರೊನಾ ಮೂರನೇ ಅಲೆ ಬೇಗನೇ ಬರುವ ತಜ್ಞರ ಭವಿಷ್ಯ, ಲಾಕ್ಡೌನ್ನಿಂದಾಗಿ ಹೆಚ್ಚುತ್ತಿರುವ ನಿರುದ್ಯೋಗ. ಈ ಸವಾಲುಗಳನ್ನು ಎದುರಿಸಿ ಪರಿಹರಿಸಬೇಕಾದ ಬಿಜೆಪಿ ಸರ್ಕಾರವೇ ಐಸಿಯುನಲ್ಲಿದೆ" ಎಂದರು.
ಇನ್ನು "ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆದು ಒಗ್ಗಟ್ಟಿನಿಂದ ಪ್ರಸಕ್ತ ವೈದ್ಯಕೀಯ ತುರ್ತುಪರಿಸ್ಥಿತಿಯನ್ನು ಎದುರಿಸಿ ಜನತೆಯ ಹಿತಕಾಪಾಡಲು ಮುಂದಾಗಬೇಕಾಗಿದ್ದ ಮುಖ್ಯಮಂತ್ರಿಗಳು ಶಾಸಕರು-ಸಚಿವರು ಮತ್ತು ಪಕ್ಷದ ಹೈಕಮಾಂಡ್ ನಾಯಕರ ಕೈಕಾಲು ಹಿಡಿದು ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ" ಎಂದಿದ್ದಾರೆ.
"ಪರಸ್ಪರ ಕಚ್ಚಾಡುತ್ತಿರುವ ರಾಜ್ಯದ ಬಿಜೆಪಿ ನಾಯಕರ ಕಿವಿಹಿಂಡಿ ಬುದ್ದಿ ಹೇಳಬೇಕಾದ ಹೈಕಮಾಂಡ್ ತೆರೆಮರೆಯಲ್ಲಿ ರಾಜ್ಯದ ನಾಯಕರನ್ನು ಪರಸ್ಪರ ಎತ್ತಿಕಟ್ಟಿ ಕಳ್ಳಾಟ ಆಡುತ್ತಿದೆ. ಬಿಜೆಪಿ ಹೈಕಮಾಂಡ್ಗೆ ಬೇಕಾಗಿರುವುದು ಸರ್ಕಾರದ ಸುಭದ್ರತೆಯೇ? ಮುಖ್ಯಮಂತ್ರಿಗಳ ಅಭದ್ರತೆಯೇ? ಬೇಗ ನಿರ್ಧಾರ ಮಾಡಿಬಿಡಿ" ಎಂದು ಹೇಳಿದ್ದಾರೆ.
"ನಗೆಪಾಟಲಿಗೀಡಾಗಿರುವ ರಾಜ್ಯ ಬಿಜೆಪಿ ಭಿನ್ನಮತವನ್ನು ನಿಯಂತ್ರಿಸಲಿಕ್ಕಾಗದ ನರೇಂದ್ರ ಮೋದಿ ತಾವೊಬ್ಬ ದುರ್ಬಲ ನಾಯಕನೆಂದು ಸಾಬೀತುಪಡಿಸಿದ್ದಾರೆ. 56 ಇಂಚಿನ ಎದೆಯವನು ಎಂದು ಕೊಚ್ಚಿಕೊಳ್ಳುತ್ತಿರುವ ಮೋದಿಯವರು ಈಗಿನ ತನ್ನ ಎದೆ ಸುತ್ತಳತೆ ಎಷ್ಟಿದೆ ಎನ್ನುವುದನ್ನಾದರೂ ಸ್ಪಷ್ಟಪಡಿಸಲಿ" ಎಂದರು.