ಬೆಂಗಳೂರು, ಜೂ 17 (DaijiworldNews/MS): ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಗೊಂದಲಗಳಿಗೆ ಕುರಿತಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ದು, ಜನರ ಪಾಲಿಗೆ ಅಪಾಯಕಾರಿಯಾಗಿರುವ ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಉಪಯೋಗ ವಿಸರ್ಜಿಸಿ ಮೊದಲು ಎಂದು ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, " ಸರ್ಕಾರದಲ್ಲಿ ನಾಯಕತ್ವ ಬಿಕ್ಕಟ್ಟು ಎದುರಾಗಿದೆಯಂತೆ, ನಾಯಕತ್ವ ಬದಲಿಸಲು ಸೂಕ್ತ ನಾಯಕನ ಹುಡುಕಾಟ ನಡೆದಿದೆಯಂತೆ, ಆದರೆ ಯಾವ ನಾಯಕರೂ ಸಿಗುತ್ತಿಲ್ಲವಂತೆ, ಬಿಜೆಪಿಯಲ್ಲಿ ಸಿಎಂ ಆಗಬಲ್ಲ ನಾಯಕನೇ ಇಲ್ಲವಂತೆ..." ಇವೆಲ್ಲವೂ ಬಿಜೆಪಿಯೊಳಗಿನ ಚರ್ಚೆಗಳ ಮಾಧ್ಯಮಗಳ ವರದಿ. ನಾಯಕತ್ವವೇ ಇಲ್ಲದ ಈ ಸರ್ಕಾರ ಇದ್ದೇನು ಉಪಯೋಗ ವಿಸರ್ಜಿಸಿ ಮೊದಲು. ನಾವಿಕನಿಲ್ಲದ ನಾವೆ, ಯಜಮಾನನಿಲ್ಲದ ಮನೆ, ನಾಯಕನಿಲ್ಲದ ಸರ್ಕಾರ ಇದು ಅಪಾಯಕಾರಿ. ಅದೂ ಸಾಂಕ್ರಾಮಿಕ ಕಾಲದಲ್ಲಿ ಮತ್ತಷ್ಟು ಅಪಾಯಕಾರಿ. ಈಗಿನ ಸರ್ಕಾರದ ನಾಯಕತ್ವ ಸರಿ ಇಲ್ಲ ಎಂದು ಬಿಜೆಪಿ ಶಾಸಕರೇ ಬಂಡೆದಿದ್ದಾರಂತೆ. ಇರುವವರನ್ನು ಬದಲಿಸಲು ನಾಯಕರ್ಯಾರೂ ಇಲ್ಲವಂತೆ. ಹಾಗಾಗಿ ಈ ಸರ್ಕಾರ ಜನರ ಪಾಲಿಗೆ ಅಪಾಯಕಾರಿಯಾಗಿದೆ ಎಂದರ್ಥ" ಎಂದು ಅಪಾದಿಸಿದ್ದಾರೆ.
"ದೇಶದ ಅಭಿವೃದ್ಧಿಗಾಗಿ ಸಮರ್ಥ ನಾಯಕತ್ವ ಪ್ರತಿಪಾದಿಸುವ ಬಿಜೆಪಿ, ನಾಯಕತ್ವವೇ ಇಲ್ಲದ ಈ ಸರ್ಕಾರವನ್ನು ಅದು ಹೇಗೆ ಸಹಿಸಿಕೊಂಡಿದೆ. ನಾಯಕತ್ವ ಸರಿ ಇಲ್ಲ ಎಂದು ಶಾಸಕರೇ ಹೇಳುತ್ತಿರುವಾಗ ನಾಯಕತ್ವ ಬದಲಿಸಲು ಏಕೆ ಇಷ್ಟು ತಿಣುಕಾಡುತ್ತಿದೆ. ಹಾಗೊಂದು ನಾಯಕತ್ವವೇ ಇಲ್ಲದ ಮೇಲೆ ಬಿಜೆಪಿ ಸರ್ಕಾರ ವಿಸರ್ಜಿಸಿ, ಅಧಿಕಾರದಿಂದ ದೂರ ಉಳಿಯಬಾರದೇಕೆ? ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ‘ರಾಕ್ಷಸ ಸರ್ಕಾರ‘ವನ್ನು ಜನರ ಹಿತಕ್ಕಾಗಿ, ಅಭಿವೃದ್ಧಿಗಾಗಿ ಕೆಡವಿದ "ಸಮಾಜ ಸುಧಾರಕರು" ಇರುವ ಪಕ್ಷ ಬಿಜೆಪಿ. ಈಗ ನಾಯಕತ್ವವಿಲ್ಲದ ‘ಅಪಾಯಕಾರಿ ಸರ್ಕಾರ‘ದ ಬಗ್ಗೆ ಆ ಸಮಾಜ ಸುಧಾರಕರು ಸುಮ್ಮನಿರುವುದಾದರೂ ಹೇಗೆ. ಈ ಸಮಾಜ ಸುಧಾರಕರ ದಿವ್ಯ ಮೌನ ನನಗೆ ಆಶ್ಚರ್ಯ ತರಿಸುತ್ತಿದೆ. ಆತಂಕ ಉಂಟು ಮಾಡಿದೆ" ಎಂದು ಪರೋಕ್ಷವಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ವಿರುದ್ದ ವ್ಯಂಗ್ಯವಾಡಿದ್ದಾರೆ.
"ಕೋವಿಡ್, ಲಾಕ್ಡೌನ್ಗಳಿಂದ ತತ್ತರಿಸಿರುವ ಕ್ಷೋಭೆಯ ಕಾಲವಿದು. ಆಳುವವರು ಅಂದುಕೊಂಡಷ್ಟು ನೆಮ್ಮದಿಯಿಂದ ಜನ ಬದುಕುತ್ತಿಲ್ಲ. ಅವರ ಬದುಕು ಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಅಧಿಕಾರ ದಾಹದ ವರ್ತನೆ ಜನರನ್ನು ಗೇಲಿ ಮಾಡುತ್ತಿದೆ. ಇದರ ಕಿಂಚಿತ್ತು ಪಾಪಪ್ರಜ್ಞೆಯಾದರೂ ಬಿಜೆಪಿಗೆ ಇರಬೇಕಿತ್ತು" ಎಂದು ಹೇಳಿದ್ದಾರೆ.
"ಇನ್ನೊಂದೆಡೆ, ಬಿಜೆಪಿಯ ದುರಾಡಳಿತ ಕಂಡು ಜನರಿಗೆ ವೈರಾಗ್ಯ ಬಂದಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಈ ದುರಾಡಳಿತ ಬರಲು, ಅದರಿಂದ ಜನರಿಗೆ ವೈರಾಗ್ಯ ಮೂಡಲು ಕಾರಣರಾರು? ಇದೇ ಕಾಂಗ್ರೆಸ್ ಅಲ್ಲವೇ? ಮೈತ್ರಿಕೂಟದಲ್ಲಿದ್ದೂ ಮಿತ್ರ ಪಕ್ಷದ ಮೇಲಿನ ದ್ವೇಷ, ಅಸೂಯೆಯಿಂದ ಶಾಸಕರನ್ನು ಓಡಿಹೋಗುವಂತೆ ಮಾಡಿದ್ದರ ಫಲವಿದು.ಎ ಬಿಜೆಪಿ ಆಡಳಿತದಿಂದ ಈಗ ಜನರಿಗೆ ವೈರಾಗ್ಯ ಬಂದಿದೆ. ಈ ವೈರಾಗ್ಯದ ಹಿಂದಿನ ಶಕ್ತಿಯಾಗಿರುವ ಕಾಂಗ್ರೆಸ್ ಈಗ ಆತ್ಮಾವಲೋಕನ ಮಾಡಿಕೊಳ್ಳಲಿದೆಯೇ? ತಾನು ಮಾಡಿದ ತಪ್ಪಿನಿಂದ ಉಂಟಾದ ಅನಾಹುತದ ಬಗ್ಗೆ ಕಾಂಗ್ರೆಸ್ ಗೆ ಈಗ ಪಶ್ಚಾತ್ತಾಪ ಮೂಡಿದಂತಿದೆ. ಆದರೆ ಈ ಅನಾಹುತ ಹೊಣೆಗಾರ ಕಾಂಗ್ರೆಸ್ ಎಂಬುದನ್ನು ಮಾತ್ರ ಅದರ ನಾಯಕರು ಎಂದಿಗೂ ಮರೆಯಬಾರದು"ಎಂದು ಕಾಂಗ್ರೆಸ್ ಪಕ್ಷದ ವಿರುದ್ದವೂ ಕಿಡಿಕಾರಿದ್ದಾರೆ.