ಉತ್ತರಪ್ರದೇಶ, ಜೂ 17 (DaijiworldNews/MS): ಗಾಜಿಪುರ ಜಿಲ್ಲೆಯ ಗಂಗಾ ನದಿಯಲ್ಲಿ, ಮರದ ಪೆಟ್ಟಿಗೆಯಲ್ಲಿ 22 ದಿನಗಳ ಹೆಣ್ಣು ಮಗುವನ್ನು ತೇಲಿ ಬಿಡಲಾಗಿದೆ. ವಿಚಿತ್ರ ಏನೆಂದರೆ ಆ ಪೆಟ್ಟಿಗೆಯಲ್ಲಿ ದುರ್ಗಾ ಮಾತೆಯ ಚಿತ್ರ, ಜಾತಕ , ಚೀಟಿ ಹಾಗೂ ಮಗುವನ್ನು ದುಪಟ್ಟಾದಲ್ಲಿ ಸುತ್ತಿಡಲಾಗಿತ್ತು. ಇನ್ನು ಆ ಚೀಟಿಯಲ್ಲಿ 'ಗಂಗೆಯ ಮಗಳು' ಎಂದು ಬರೆಯಲಾಗಿತ್ತು.
ದಾದ್ರಿ ಘಾಟ್ ಬಳಿ ಮಗು ಅಳುತ್ತಿರುವುದನ್ನು ಗಮನಿಸಿ ಮೀನುಗಾರ ಚೌಧರಿ ಮಗುವನ್ನು ಮನೆಗೆ ಎತ್ತಿಕೊಂಡು ಹೋಗಿದ್ದಾನೆ. ಈ ಮಾಹಿತಿ ಪ್ರಚಾರ ಪಡೆಯುತ್ತಿದ್ದಂತೆ ಪೊಲೀಸರು ಚೌಧರಿ ಮನೆಗೆ ಭೇಟಿ ನೀಡಿದ್ದಾರೆ. ನಂತರ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ತಪಾಸಣೆಗಾಗಿ ಕರೆದೊಯ್ಯಲಾಯಿತು. ಮಗುವಿಗೆ ಈಗ ‘ಗಂಗಾ’ ಎಂದು ಹೆಸರಿಡಲಾಗಿದೆ
ಮಾಹಿತಿ ಪಡೆದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದು, ಮೀನುಗಾರನ ಕೆಲಸವನ್ನು ಕೊಂಡಾಡಿದ್ದಾರೆ. ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಲಿದೆ ಎಂದಿದ್ದಾರೆ. ಮಗುವಿನ ಜೀವ ಕಾಪಾಡಿದ ಮೀನುಗಾರ ಮಾನವೀಯತೆಗೆ ಮಾದರಿಯಾಗಿದ್ದಾನೆ. ಈತನ ಈ ಕೆಲಸವನ್ನು ಮೆಚ್ಚಿ ಸರ್ಕಾರದಿಂದ ಸಿಗಬಹುದಾದ ಎಲ್ಲಾ ಸವಲತ್ತುಗಳು ಸಿಗುವಂತೆ ಮಾಡಲಾಗುವುದು ಎಂದು ಸಿಎಂ ಆದಿತ್ಯನಾಥ್ ಹೇಳಿದ್ದಾರೆ.