ಬೆಂಗಳೂರು, ಜೂ 16 (DaijiworldNews/PY): "ಬಿಜೆಪಿ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಉತ್ತಮ ಕಾರ್ಯ ಮಾಡುತ್ತಿದೆ" ಎಂದು ಬಿಜೆಪಿ ಉಸ್ತುವಾರಿ ಸಚಿವ ಅರುಣ್ ಸಿಂಗ್ ತಿಳಿಸಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾವುದೇ ಶಾಸಕರು ಏನೇ ವಿಚಾರವನ್ನು ಮಾಧ್ಯಮದ ಮುಂದೆ ಹೇಳಿಕೊಳ್ಳುವ ಬದಲು ನನ್ನೊಂದಿಗೆ ವೈಯುಕ್ತಿಕವಾಗಿ ಹೇಳಿಕೊಳ್ಳಿ. ಬಿಜೆಪಿಯಲ್ಲಿ ಸಚಿವರು, ಶಾಸಕರ ನಡುವೆ ಯಾವುದೇ ರೀತಿಯಾದ ಭಿನ್ನಮತವಿಲ್ಲ" ಎಂದಿದ್ದಾರೆ.
"ಕೊರೊನಾ ವೇಳೆ ಸಿಎಂ ಮಾತ್ರವಲ್ಲದೇ ಎಲ್ಲಾ ಸಚಿವರು ರಾತ್ರಿ-ಹಗಲೆನ್ನದೇ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದ ಬಡ ಕುಟುಂಬಗಳಿಗೆ ತಲಾ 1 ಲಕ್ಷ ನೀಡುವ ಯೋಜನೆ ದೇಶದಲ್ಲೇ ಮೊದಲು" ಎಂದು ಶ್ಲಾಘಿಸಿದರು.
ಈ ವೇಳೆ ವಿಪಕ್ಷಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಅವರು, "ಕೊರೊನಾ ವೇಳೆ ಕಾಂಗ್ರೆಸ್ ನಾಯಕರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಜೆಡಿಎಸ್ನವರು ಕ್ವಾರಂಟೈನ್ ಆಗಿದ್ದಾರೆ. ವಿಪಕ್ಷದವರು ಯಾರೂ ಕೂಡಾ ಜನರ ಕಷ್ಟಗಳಿಗೆ ನೆರವಾಗುತ್ತಿಲ್ಲ" ಎಂದು ಹೇಳಿದ್ದಾರೆ.