ಬೆಂಗಳೂರು, ಜೂ 16 (DaijiworldNews/PY): "ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೇ, ಕಟ್ಟೆ ಪಂಚಾಯ್ತಿ ನಡೆಸಲು ಓಡೋಡಿ ಬರುವ ತಾವು, ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಸಮಯವಿಲ್ಲವೇ?" ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಅರುಣ್ ಸಿಂಗ್ ಅವರೇ, 'ಕಟ್ಟೆ ಪಂಚಾಯ್ತಿ' ನಡೆಸಲು ಓಡೋಡಿ ಬರುವ ತಾವು, ಜನರ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲು ಸಮಯವಿಲ್ಲವೇ?. ಈ ಗತಿಗೆಟ್ಟ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಆಂತರಿಕ ಕಿತ್ತಾಟಗಳೇ ಸುದ್ದಿ ಮಾಡುತ್ತಿವೆ ಹೊರತು ಸಾಧನೆಗಳಲ್ಲ.ಈ ದುರಾಡಳಿತದ ಬಗ್ಗೆ ತಮಗೆ ಕನಿಷ್ಠ ವಿಷಾದ, ನಾಚಿಕೆ ಯಾವುದೂ ಇಲ್ಲವೇ?" ಎಂದು ಕೇಳಿದೆ.
"ರಾಜ್ಯ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಬಿಜೆಪಿ ಪಕ್ಷದ ಆಂತರಿಕ ಕಲಹ ತಾರಕಕ್ಕೇರಿದೆ. ಬೆಲೆ ಏರಿಕೆ, ನಿರುದ್ಯೋಗ, ಕೊರೊನಾ 3ನೇ ಅಲೆ, ಬ್ಲಾಕ್ ಫಂಗಸ್, ರೈತರ ಸಂಕಷ್ಟ, ಆರ್ಥಿಕ ಕುಸಿತಗಳ ಬಗ್ಗೆ ಚಿಂತಿಸಲು ಸಮಯವಿಲ್ಲದ ಬೇಜವಾಬ್ದಾರಿ ಬಿಜೆಪಿ ಸರ್ಕಾರಕ್ಕೆ ಕುರ್ಚಿ ಕದನ ನಡೆಸಲು ಮಾತ್ರ ಭರಪೂರ ಸಮಯವಿದೆ" ಎಂದು ಆರೋಪಿಸಿದೆ .
"ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಡಾಬಿನ ಚಿಂತೆ" ಎನ್ನುವಂತೆ ರಾಜ್ಯದ ಜನತೆಗೆ ಬದುಕಿನ ಚಿಂತೆ, ಬಿಜೆಪಿಗೆ ಕುರ್ಚಿ ಕದನದ ಚಿಂತೆಯಾಗಿದೆ. ಒಂದು ಕಡೆ ಸಹಿ ಸಂಗ್ರಹಿಸುವವರು, ಮತ್ತೊಂದು ಕಡೆ ಪತ್ರ ಬರೆಯುವವರು, ಇನ್ನೊಂದು ಕಡೆ ಆ'ಸಂತೋಷಗೊಂಡವರು! ಎಂದಿಗೂ ಜನಪರವಾಗಿರದ ಬಿಜೆಪಿಗೆ ಅಧಿಕಾರ ಸಿಗುವುದು ರಾಜ್ಯಕ್ಕೆ 'ಶಾಪ' ತಟ್ಟಿದಂತೆ! ಎಂದಿದೆ.
"ಬೆಲೆ ಏರಿಕೆಗೆ -ಮೌನ, ನೆರೆ ಪರಿಹಾರಕ್ಕೆ - ಮೌನ, ಆಕ್ಸಿಜನ್ ಕೇಳಿದಾಗ - ಮೌನ, ರೆಮಿಡಿಸಿವಿರ್ ಕೇಳಿದಾಗ - ಮೌನ, ಜಿಎಸ್ಟಿ ಬಾಕಿ ಕೇಳಿದಾಗ - ಮೌನ,ಅಂಪೊಟರಿಸನ್ ಕೇಳಿದಾಗ - ಮೌನ. ಜನರ ವಿಷಯಗಳಿಗೆ ಮೌನ ವಹಿಸುವ ಬಿಜೆಪಿ ರಾಷ್ಟ್ರ ನಾಯಕರು ಕುರ್ಚಿ ಕಲಹ ನಿರ್ವಹಿಸಲು ಮಾತ್ರ ಗಡಿಬಿಡಿಯಲ್ಲಿ ಓಡೋಡಿ ಬರುತ್ತಾರೆ! ಬಿಜೆಪಿ ಆದ್ಯತೆ ಜನತೆಯಲ್ಲ, ಅಧಿಕಾರ" ಎಂದು ಕಿಡಿಕಾರಿದೆ.
ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅರುಣ್ ಸಿಂಗ್ ಮೂರು ದಿನಗಳ ಕಾಲ ಶಾಸಕರು, ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಇದರೊಂದಿಗೆ ಜೂನ್ 18ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಕುತೂಹಲಕ್ಕೆ ಕಾರಣವಾಗಿದೆ.