ಬೆಂಗಳೂರು, ಜೂ 16 (DaijiworldNews/MS): ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ , "ರಾಜ್ಯ ಬಿಜೆಪಿಯ ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಅರುಣ್ ಸಿಂಗ್ ಅವರು ಬರುತ್ತಿದ್ದಾರೆ" ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, " ಪಕ್ಷದಲ್ಲಿ ಗೊಂದಲ ಸಮಸ್ಯೆ ಇಲ್ಲ, ಸರ್ಕಾರವೂ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ ರಾಜ್ಯಕ್ಕೆ ವರಿಷ್ಟರು, ಸಚಿವರು ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಭೇಟಿ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಪಕ್ಷವನ್ನು ಬಲಪಡಿಸಲು, ಒಟ್ಟಾರೆ ವ್ಯವಸ್ಥೆ ಸರಿಪಡಿಸಲು ಆಗಮಿಸುತ್ತಿದ್ದಾರೆ ಎಂದು ಸಚಿವ ಕೋಟ ಹೇಳಿದರು.
ಅರುಣ್ ಸಿಂಗ್ ಅವರು ಕೂಡಾ ಕಾಲಕಾಲಕ್ಕೆ ರಾಜ್ಯಕ್ಕೆ ಭೇಟಿ ನೀಡುತ್ತಾರೆ, ಬಂದಾಗ ಅನೇಕ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಆದರೆ ನಾಯಕತ್ವದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಟ್ಟಾಗಿದ್ದೇವೆ, ಚೆನ್ನಾಗಿದ್ದೇವೆ. ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ ಎಂದರು.
17 ವಲಸಿಗರ ಬಗ್ಗೆ ಈಶ್ವರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ ಪೂಜಾರಿಯವರು, ಈಶ್ವರಪ್ಪ ನಮಗಿಂತ ತುಂಬಾ ಹಿರಿಯರು ಅವರು ಏನು ಹೇಳಿದ್ದಾರೆ ಎಂದು ತಿಳಿದಿಲ್ಲ ಆ ಬಗ್ಗೆ ತಿಳಿದುಕೊಂಡು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.