ಬೆಂಗಳೂರು, ಜೂ 16 (DaijiworldNews/PY): "ಜನರು ಕೊರೊನಾ ಸಂಕಷ್ಟದಿಂದ ಬಳಲುತ್ತಿದ್ದಾರೆ. ಈ ರೀತಿಯ ಸಂದರ್ಭ ಜನರಿಗೆ ಸರ್ಕಾರ ನೆರವಾಗಬೇಕು. ಆದರೆ, ಜನರಿಂದ ಸರ್ಕಾರವೇ ಜನರಿಂದ ಪಿಕ್ ಪಾಕೆಟ್ ಮಾಡುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರು ಸರತಿ ಸಾಲಿನಲ್ಲಿ ನಿಲ್ಲುವುದೇ ಆಗಿದೆ. ನೋಟ್ ಬ್ಯಾನ್ ಮಾಡಿ ಬ್ಯಾಂಕ್ ಮುಂದೆ ನಿಲ್ಲುವಂತೆ ಮಾಡಿದರು. ಕೊರೊನಾ ಸಂದರ್ಭ ಬೆಡ್ಗಾಗಿ ಆಸ್ಪತ್ರೆಗಳ ಬಳಿ ಸರತಿ ಸಾಲು ನಿಲ್ಲಿಸಿದರು. ಸೋಂಕಿತರ ಚಿಕಿತ್ಸೆಗಾಗಿ ಔಷಧಕ್ಕಾಗಿ ನಿಲ್ಲಿಸಿದರು. ಕೊನೆಯದಾಗಿ ಸಾಯುವಾಗಲು ಚಿತಾಗಾರದ ಬಳಿ ಸರತಿ ಸಾಲು ನಿಲ್ಲುವಂತೆ ಮಾಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳ ಮುಖೇನ ಜನರನ್ನು ಲೂಟಿ ಹೊಡೆಯುತ್ತಿವೆ. ಖಾಸಗಿ ಆಸ್ಪತ್ರೆಗೆ ಹೋದರೆ ಯಾವುದೇ ರೋಗ ಇಲ್ಲವೆಂದರೂ ಕೂಡಾ ಕನಿಷ್ಠ 5 ಲಕ್ಷ ಬಿಲ್ ಮಾಡುತ್ತಾರೆ. ಆದರೆ, ರೋಗ ಇಲ್ಲದಿದ್ದರೂ ಆಸ್ಪತ್ರೆ ಬಿಲ್ ಏಕೆ ಹೆಚ್ಚು ಮಾಡುತ್ತಾರೆ ಎನ್ನುವುದೇ ತಿಳಿಯುತ್ತಿಲ್ಲ. ಸರ್ಕಾರ ಹಾಗೂ ಆಸ್ಪತ್ರೆಗಳ ನಡುವೆ ಯಾವ ರೀತಿಯಾದ ಒಪ್ಪಂದ ನಡೆದಿದೆ ಎಂದು ಗೊತ್ತಿಲ್ಲ" ಎಂದಿದ್ದಾರೆ.