ಬೆಂಗಳೂರು, ಜೂ 16 (DaijiworldNews/MS): ಕೊರೊನಾ ಸಂಕಷ್ಟದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತಯಾರಿ ನಡೆಸಿದೆ. ಜುಲೈ 2021ರ ಎಸೆಸೆಲ್ಸಿಪರೀಕ್ಷೆಗೆ ಸಂಬಂಧಿಸಿದ ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆಪತ್ರಿಕೆಗಳನ್ನು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.ಉದ್ಯೋಗ ನೇಮಕಾತಿಗೆ ನಡೆಸುವ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿ ಪರೀಕ್ಷೆಯನ್ನು ಈ ಬಾರಿ ನಡೆಸಲಾಗುತ್ತಿದೆ.
ಜೂನ್ 2021ರಲ್ಲಿ ನಡೆಯಬೇಕಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಮುಂದೂಡಿ ಕೊವೀಡ್ ಕಾರಣದಿಂದ ಮತ್ತಷ್ಟು ಸರಳೀಕರಿಸಿ ಎರಡು ದಿನಗಳಿಗೆ ಪರೀಕ್ಷೆಯನ್ನು ಸೀಮಿತಗೊಳಿಸಿ, ಬಹು ಆಯ್ಕೆ ಪ್ರಶ್ನೆ ( Multiple Choice Question Based ) ಮಾದರಿಯಲ್ಲಿ ವಿಷಯವಾರು ಗರಿಷ್ಠ 40 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಿದೆ.
ಅದರ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬಹು ಆಯ್ಕೆ ಪ್ರಶ್ನೆ ಆಧಾರಿತ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಉತ್ತರಗಳನ್ನು ಶೇಡ್ ಮಾಡುವ ಓಎಂಆರ್ ಗಳ ಮಾದರಿಯನ್ನು ಮಂಡಳಿಯ http://sslc.karnataka.gov.in ನಲ್ಲಿ ಪ್ರಕಟಿಸಲಾಗಿದೆ.
ಈ ಬಗ್ಗೆ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು ಸದರಿ ಮಾದರಿ ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಗಳ ಮಾದರಿಯನ್ನು ಡೌನ್ ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುವಾಗುವಂತೆ ಕ್ರಮವಹಿಸಲು ಸೂಚಿಸಿದೆ. ಉಳಿದಂತೆ ಭಾಷಾ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂಬುದಾಗಿ ತಿಳಿಸಿದೆ.