ಬೆಂಗಳೂರು, ಜೂ 16 (DaijiworldNews/MS): ನಾಯಕತ್ವ ಬದಲಾವಣೆ ಚರ್ಚೆಯ ನಡುವೆಯೇ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅರುಣ್ ಸಿಂಗ್ ಮೂರು ದಿನಗಳ ಕಾಲ ಶಾಸಕರು, ಸಚಿವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಇದರೊಂದಿಗೆ ಜೂನ್ 18ರಂದು ರಾಜ್ಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯಕ್ಕೆ ಆಗಮಿಸಿದ ಅರುಣ್ ಸಿಂಗ್ ಇಂದು ಸಂಜೆ 5ಕ್ಕೆ ಪಕ್ಷದ ಕಚೇರಿಯಲ್ಲಿ ಸಚಿವರೊಂದಿಗೆ ಅಧಿಕೃತ ಸಭೆ ನಡೆಸಲಿದ್ದಾರೆ. ನಾಳೆ ದಿನ ಶಾಸಕರನ್ನು ಭೇಟಿಯಾಗಲಿದ್ದಾರೆ. ಅವರ ಸಭೆಯ ಬಗ್ಗೆ ಭಾರೀ ಕುತೂಹಲ ಮೂಡಿದೆ. ಪ್ರತಿಯೊಬ್ಬ ಶಾಸಕರಿಗೂ ಪ್ರತ್ಯೇಕ ಭೇಟಿಗೆ ಸಮಯ ನಿಗದಿ ಮಾಡಲಾಗಿದ್ದು, ಗುಂಪುಗುಂಪಾಗಿ ಶಾಸಕರು ಭೇಟಿಯಾಗುವಂತಿಲ್ಲ. ಗುಂಪು ಗುಂಪಾಗಿ ಸಭೆ ನಡೆಸುವಂತಿಲ್ಲ. ಅರುಣ್ ಸಿಂಗ್ ಅವರ ಬಳಿ ಚರ್ಚಿಸಿರುವುದನ್ನು ಮಾಧ್ಯಮಗಳಿಗೆ ತಿಳಿಸುವಂತಿಲ್ಲ ಎಂದು ಹೈಕಮಾಂಡ್ ನಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಇದರ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡುವ ಶಾಸಕರಿಗೆ ಅರುಣ್ ಸಿಂಗ್ ಎಚ್ಚರಿಕೆ ರವಾನಿಸುವ ಸಾಧ್ಯತೆ ಇದೆ. ಒಟ್ಟಾರೆ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳಿಗೆ ಸಭೆಯ ಬಳಿಕ ತೆರೆ ಬೀಳಲಿದೆ ಎಂದು ಹೇಳಲಾಗಿದೆ.