ಬೆಳಗಾವಿ, ಜೂ.15 (DaijiworldNews/HR): "ಸಿಎಂ ಬದಲಾವಣೆಗೆ ಬಿಜೆಪಿಯಲ್ಲಿ ಕುಸ್ತಿ ಆರಂಭವಾಗಿದ್ದು, ಶಾಸಕರು ಪರ-ವಿರೋಧವಾಗಿ ಸಹಿ ಸಂಗ್ರಹ ಮಾಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಂದುವರಿಯುವುದು ಕುಸ್ತಿಯ ಮೇಲೆ ಅವಲಂಬಿತವಾಗಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಈಗ ನಡೆದಿರುವ ಬೆಳವಣಿಗೆಗಳು ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಯಾರು ಏನು ವರದಿ ನೀಡುತ್ತಾರೋ, ಅವರ ವರಿಷ್ಠರು ಏನು ನಿರ್ಧಾರ ಮಾಡುತ್ತಾರೋ ಅವರಿಗೆ ಬಿಟ್ಟಿದ್ದು. ನಾವು ಎಲ್ಲವನ್ನೂ ಕಾದು ನೋಡುತ್ತೇವೆ" ಎಂದರು.
ಇನ್ನು "ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಜನಪರ ಕೆಲಸ ಮಾಡುತ್ತಿದ್ದು, ಲಾಕ್ಡೌನ್ ವೇಳೆ ಬಡವರು, ಕಾರ್ಮಿಕರು, ರೈತರ ಪರವಾಗಿ ನಿಂತಿದೆ. ಕೊರೊನಾದ ಎರಡನೇಯ ಅಲೆಯಲ್ಲಿ ನಿರಂತರವಾಗಿ ಸರ್ಕಾರವನ್ನು ಎಚ್ಚರಿಸಿ ಲಸಿಕೆ, ಹಾಸಿಗೆ, ಆಮ್ಲಜನಕ ವ್ಯವಸ್ಥೆ ಮಾಡಿಸಿರುವ ಬಗ್ಗೆ ಹೆಮ್ಮೆ ಇದೆ" ಎಂದಿದ್ದಾರೆ.
ಕಾಂಗ್ರೆಸ್ ಪಕ್ಷವೂ ಎಲ್ಲರಿಗೂ ಉಚಿತ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದು, ಇದರ ಪರಿಣಾಮವಾಗಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವ ನಿರ್ಧಾರವನ್ನು ಸರ್ಕಾರ ಮಾಡಿದೆ" ಎಂದು ಹೇಳಿದ್ದಾರೆ.