ಬೆಂಗಳೂರು, ಜೂ 15 (DaijiworldNews/PY): ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟ ನಟ ಸಂಚಾರಿ ವಿಜಯ್ (37) ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ವಿಜಯ್ ಅವರ ಕುಟುಂಬದವರು ಅವರ ಅಂಗಾಂಗಳನ್ನು ದಾನ ಮಾಡಲು ಅನುಮತಿ ನೀಡಿದ್ದು, ವಿಜಯ್ ಅವರ ಅಂಗಾಂಗ ಟ್ರಾನ್ಸ್ಪ್ಲಾಂಟೇಷನ್ ಯಶಸ್ವಿಯಾಗಿ ನಡೆದಿದೆ.
ಸೋಮವಾರ ರಾತ್ರಿ 9.30ರಿಂದ ಮಧ್ಯರಾತ್ರಿ 12 ಗಂಟೆಯ ಸುಮಾರಿಗೆ ವೈದ್ಯರು ಸಂಚಾರಿ ವಿಜಯ್ ಅವರ ಅಂಗಾಂಗಳನ್ನು ಬೇರ್ಪಡಿಸಿದ್ದು, ಬಳಿಕ ಅದೇ ರಕ್ತದ ಗುಂಪಿನ ವ್ಯಕ್ತಿಗಳಿಗೆ ಕಸಿ ಮಾಡಲು ಕಳುಹಿಸಲಾಗಿತ್ತು.
ವಿಜಯ್ ಅವರ ಕಿಡ್ನಿಯನ್ನು ಮಹಿಳೆಯೋರ್ವರಿಗೆ ಟ್ರಾನ್ಸ್ಪ್ಲಾಂಟೇಷನ್ ಮಾಡಿದ್ದು, ಪ್ರಕ್ರಿಯೆ ಯಶಸ್ವಿಯಾಗಿದೆ. ಇನ್ನು ವಿಜಯ್ ಅವರ ಕಣ್ಣುಗಳನ್ನು ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ಜೋಡಣೆ ಮಾಡಲಾಗಿದೆ. ಒಬ್ಬರಿಗೆ ಈಗಾಗಲೇ ಕಣ್ಣು ಜೋಡಣೆ ಯಶಸ್ವಿಯಾಗಿದ್ದು, ಇನ್ನೋರ್ವರಿಗೆ ಕಣ್ಣು ಜೋಡಣೆ ಕಾರ್ಯ ನಡೆಯುತ್ತಿದೆ.
ನಟ ವಿಜಯ್ ಅವರ ಅಂತ್ಯ ಸಂಸ್ಕಾರವು ಅವರ ಸ್ವಗ್ರಾಮ ಪಂಚನಹಳ್ಳಿಯಲ್ಲಿ ನಡೆಯಿತು. ವಿಜಯ್ ಅವರ ಸ್ನೇಹಿತ ರಘು ತೋಟದಲ್ಲಿ ಕುಪ್ಪೂರು ಯತೀಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ಕಾರ್ಯದ ವಿಧ ವಿಧಾನಗಳು ನಡೆದವು.
ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಪೊಲೀಸರು ಮೂರು ಸುತ್ತುಗುಂಡು ಹಾರಿಸಿ ವಿಜಯ್ ಅವರಿಗೆ ಗೌರವ ಸಮರ್ಪಣೆ ಮಾಡಿದರು. ನಂತರ ವೀರಶೈವ ಲಿಂಗಾಯುತ ಧಾರ್ಮಿಕ ವಿಧಿಯ ಪ್ರಕಾರ ಶವ ಸಂಸ್ಕಾರ ನಡೆಸಲಾಯಿತು.