ಮೈಸೂರು, ಜೂ 15 (DaijiworldNews/PY): "ನಾವು 17 ಮಂದಿ ಬಿಜೆಪಿ ಬಂದ ಕಾರಣ ಸರ್ಕಾರ ರಚನೆಯಾಗಿ ಕೆ.ಎಸ್.ಈಶ್ವರಪ್ಪ ಅವರು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಟಾಂಗ್ ನೀಡಿದ್ದಾರೆ.
17 ಜನ ಹೊರಗಿನಿಂದ ಬಂದ ಕಾರಣ ಸಮಸ್ಯೆ ಆಗಿದೆ ಎನ್ನು ಈಶ್ವರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಿ.ಸಿ. ಪಾಟೀಲ್, "17 ಮಂದಿ ಬಿಜೆಪಿಗೆ ಬಂದ ಕಾರಣ ಇಂದು ಸರ್ಕಾರದ ಬಂದಿದೆ. ಸರ್ಕಾರ ಬಂದ ಕಾರಣ ಈಶ್ವರಪ್ಪ ಅವರು ಸಚಿವರಾಗಿದ್ದಾರೆ. ಈಶ್ವರಪ್ಪ ಅವರು ಈ ರೀತಿಯಾದ ಹೇಳಿಕೆ ನೀಡಿದ್ದರೆ ಅದು ಸರಿಯಲ್ಲ. ಅವರು ಈ ರೀತಿಯಾಗಿ ಮಾತನಾಡಿಲ್ಲ ಎಂದು ಭಾವಿಸುತ್ತೇನೆ" ಎಂದಿದ್ದಾರೆ.
"ಕೆಲ ಮಂದಿ ನಾಯಕತ್ವದ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ.ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ಎಲ್ಲಾ ವಿಚಾರಗಳಿಗೆ ನಾಳೆ ತೆರೆಬೀಳಲಿದೆ. ಪಕ್ಷದಲ್ಲಿ ಗೊಂದಲಗಳಿದ್ದಲ್ಲಿ ಅದನ್ನು ಈ ವೇಳೆ ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.
"ಬಿಜೆಪಿಗೆ ಪೂರ್ಣವಾದ ಬಹುಮತ ಸಿಕ್ಕಿದ್ದರೆ ಸಿಎಂ ಬದಲಾವಣೆ ಗೊಂದಲ ಉಂಟಾಗುತ್ತಿರಲಿಲ್ಲ. 17 ಜನ ಹೊರಗಿನಿಂದ ಬಂದ ಕಾರಣ ಸಮಸ್ಯೆ ಆಗಿದೆ. ಪಕ್ಷದ ನಾಯಕರು ಗೊಂದಲ ನಿಮಾಣ ಮಾಡಿಕೊಂಡಿಲ್ಲ. ಚುನಾವಣೆಯ ಫಲಿತಾಂಶವೇ ಗೊಂದಲಕ್ಕೆ ಕಾರಣ. ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಅವರು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ" ಎಂದು ಈಶ್ವರಪ್ಪ ಹೇಳಿದ್ದರು.