ಬೆಂಗಳೂರು, ಜೂ 15 (DaijiworldNews/PY): ಅಕ್ರಮ ಹಣ ವರ್ಗಾವಣೆ, ಅಧಿಕಾರ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಬಿಎಸ್ವೈ, ಪುತ್ರ ಬಿ.ವೈ ವಿಜಯೇಂದ್ರ ಸೇರಿದಂತೆ ಆರು ಮಂದಿಯ ವಿರುದ್ದ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ.
ಟಿ.ಜೆ. ಅಬ್ರಾಹಂ ಎನ್ನುವವರು ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರು 2020ರಲ್ಲಿ ನಾಲ್ಕನೇ ಬಾರಿ ಸಿಎಂ ಆದ ಬಳಿಕ ಅವರ ಮೊಮ್ಮಗ ಶಶಿಧರ ಮರಡಿ ಅವರು ಡೆವಲಪರ್ ಚಂದ್ರಕಾಂತ್ ರಾಮಲಿಂಗ ಅವರಿಂದ ಬಿಲ್ ಕ್ಲಿಯರ್ಗಾಗಿ 12 ಕೋಟಿ. ರೂ. ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಶಿಧರ ಮರಡಿ ಮತ್ತು ಚಂದ್ರಕಾಂತ್ ಅವರ ನಡುವೆ ಹಣ ವರ್ಗಾವಣೆ ಬಗ್ಗೆ ನಡೆದ ವಾಟ್ಸಾಪ್ ಚಾಟ್ನ ಮಾಹಿತಿಯನ್ನು ದೂರುದಾರ ಟಿ.ಜೆ ಅಬ್ರಾಹಂ ಅವರು ಇಡಿಗೆ ಸಲ್ಲಿಸಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪ , ಬಿ.ವೈ ವಿಜಯೇಂದ್ರ ಸೇರಿದಂತೆ ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ್ ರಾಮಲಿಂಗಂ ಹಾಗೂ ವಿರೂಪಾಕ್ಷಪ್ಪ ಯಮಕನಮರಡಿ ಎಂಬುವವರ ವಿರುದ್ದ ದೂರು ನೀಡಲಾಗಿದೆ.
ನಾಯಕತ್ವ ಬದಲಾವಣೆ ವಿಚಾರದಲ್ಲಿ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವ ಸಿಎಂ ಬಿಎಸ್ವೈ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯವು ಈ ದೂರನ್ನು ಹೇಗೆ ಪರಿಗಣಿಸುತ್ತದೆ. ಇದನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಹೇಗೆ ಎದುರಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.