ಶಿರಸಿ, ಜೂ 15 (DaijiworldNews/PY): "ಸರ್ಕಾರದ ನಾಯಕತ್ವದ ಮೇಲಿನ ಆರೋಪಗಳನ್ನು ಹೈಕಮಾಂಡ್ ಒಪ್ಪುವುದಿಲ್ಲ. ಈ ಹಿನ್ನೆಲೆ ಉಸ್ತುವಾರಿ ಅರುಣ್ ಸಿಂಗ್ ಅವರು ಅಭಿಪ್ರಾಯಗಳನ್ನು ಆಲಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡುವ ಪಕ್ಷ. ಗೊಂದಲಗಳಿಗೆ ನಾಯಕತ್ವ ಬದಲಾವಣೆ, ಪಕ್ಷದ ನಾಯಕರು ಕಾರಣರಲ್ಲ. ಸರ್ಕಾರಕ್ಕೆ ಮೊದಲೇ ಬಹುಮತ ಬರುತ್ತಿದ್ದಲ್ಲಿ ಈ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ" ಎಂದಿದ್ದಾರೆ.
"ಅರುಣ್ ಸಿಂಗ್ ಅವರು ಸಚಿವರು ಹಾಗೂ ಶಾಸಕರೊಂದಿಗೆ ಚರ್ಚೆ ನಡೆಸಲಿದ್ದಾರೆ. ಸಚಿವರು, ಶಾಸಕರು, ಪಕ್ಷದ ಕೋರ್ ಕಮಿಟಿ ಪ್ರಮುಖರ ಅಭಿಪ್ರಾಯ ಆಲಿಸಲಿದ್ದಾರೆ" ಎಂದು ತಿಳಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ಕೈ ಪಕ್ಷದ ಯಾವ ನಾಯಕರೂ ಕೂಡಾ ಖಂಡಿಸಿಲ್ಲ. ಕಾಂಗ್ರೆಸ್ ದೇಶವಿರೋಧಿ ಹೇಳಿಕೆಗಳಿಗೆ ಬೆಂಬಲ ನೀಡುತ್ತದೆ ಎಂದು ಇದರಿಂದ ಸಾಬೀತಾಗುತ್ತದೆ" ಎಂದು ಹೇಳಿದ್ದಾರೆ.